ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕುತುಬ್ ಮಿನಾರ್‌ನ ಕುವ್ವತ್-ಉಲ್-ಇಸ್ಲಾಂ ಮಸೀದಿಯಲ್ಲಿ ಎರಡು ಕಬ್ಬಿಣದ ಮೆಶ್‌ಗಳನ್ನು ತೆಗೆದು ಹಾಕಿದೆ. ಅಲ್ಲಿ ಗಣೇಶನ ವಿಗ್ರಹಗಳು ಸ್ಪಷ್ಟವಾಗಿ ಗೋಚರಿಸಿವೆ. ಈ ಕಬ್ಬಿಣದ ಜಾಲರಿಯನ್ನು ತೆಗೆದು ಹಾಕಬೇಕು ಎಂಬುದು ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳ ಬೇಡಿಕೆಯಾಗಿತ್ತು.
ಗಣೇಶನ ಮೂರ್ತಿಗಳನ್ನು ವರ್ಷಗಳ ಹಿಂದಷ್ಟೆ ಎರಡು ಕಬ್ಬಿಣದ ಜಾಲರಿಯಿಂದ ಮುಚ್ಚಲಾಗಿತ್ತು. ಇದೀಗ ಮೂರ್ತಿಗಳನ್ನು ಸ್ವಚ್ಛಗೊಳಿಸಿದ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಗುಂಡು ನಿರೋಧಕ ಗಾಜಿನಿಂದ ವಿಗ್ರಹವನ್ನು ಮುಚ್ಚಿದೆ. ವಿಗ್ರಹವು ತಲೆಕೆಳಗಾದ ಸ್ಥಿತಿಯಲ್ಲಿದೆ ಎಂದು ನಂಬಲಾಗಿತ್ತು. ಆದರೆ ಈಗ ಮೂರ್ತಿ ನೆಟ್ಟಗಿರುವುದು ಗೋಚರಿಸುತ್ತಿದೆ. ಪ್ರವಾಸಿಗರಿಗೆ ಇಲ್ಲಿ ಗಣೇಶನ ವಿಗ್ರಹಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಿಲ್ಲ.
ಕುತುಬುದ್ದೀನ್ ಐಬಕ್, ಮಸೀದಿಯನ್ನು ನಿರ್ಮಿಸುವ ಸಲುವಾಗಿ 27 ಹಿಂದೂ ಮತ್ತು ಜೈನ ದೇವಾಲಯಗಳನ್ನು ನಾಶಪಡಿಸಿದ್ದಾನೆ ಎನ್ನಲಾಗುತ್ತದೆ. ಕುತುಬ್ ಮಿನಾರ್ ಸಂಕೀರ್ಣದಿಂದ ಗಣೇಶನ ವಿಗ್ರಹಗಳನ್ನು ಹಿಂಪಡೆಯಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ ಎಎಸ್‌ಐಗೆ ಕೇಳಿಕೊಂಡಿತ್ತು. ಆದರೆ ದೆಹಲಿ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಎಸ್‌ಐಗೆ ಆದೇಶಿಸಿದೆ. ಗಣೇಶ ಮೂರ್ತಿಗಳನ್ನು ತೆಗೆಯುವ ಎಎಸ್‌ಐ ಯೋಜನೆ ವಿರುದ್ಧದ ಅರ್ಜಿಯ ವಿಚಾರಣೆಯನ್ನು ಸಹ ಕೋರ್ಟ್ ನಡೆಸುತ್ತಿದೆ. ಎರಡು ವಿಗ್ರಹಗಳನ್ನು ಉಲ್ಟಾ ಗಣೇಶ ಮತ್ತು ಪಂಜರದಲ್ಲಿರುವ ಗಣೇಶ ಎಂದು ಕರೆಯಲಾಗುತ್ತದೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗೊತ್ತುಪಡಿಸಿದ ಸಂಕೀರ್ಣದೊಳಗೆ ಅವು ಕಂಡು ಬರುತ್ತವೆ. ಇನ್ನೊಂದೆಡೆ ಪುರಾತನ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯ ಹೊರ ಗೋಡೆಯ ಮೇಲೆ ಕಂಡು ಬರುವ ಶೃಂಗಾರ್ ಗೌರಿ ಎಂಬ ದೇವತೆಯನ್ನು ಆರಾಧಿಸುವ ಹಕ್ಕನ್ನು ಪಡೆಯಲು ಹಿಂದೂ ಗುಂಪುಗಳು ಸುದೀರ್ಘವಾದ ನ್ಯಾಯಾಲಯದ ಹೋರಾಟವನ್ನು ನಡೆಸುತ್ತಿವೆ.