ನಾಡಿಶೋಧನ ಪ್ರಾಣಾಯಾಮಕ್ಕೆ ಐದೇ ನಿಮಿಷ ಮೀಸಲಿಟ್ಟರೆ ಸಾಕು, ದಿನಪೂರ್ತಿ ಸುಸ್ತು ಕಾಡುವುದೇ ಇಲ್ಲ. ಈ ಪ್ರಾಣಾಯಾಮವನ್ನು ಅನುಲೋಮ-ವಿಲೋಮ ಪ್ರಾಣಾಯಾಮ ಎಂದು ಕರೆಯುತ್ತೇವೆ.
ಇದನ್ನು ಮಾಡಲು ಮೊದಲು ಸುಖಾಸನದಲ್ಲಿ ಕುಳಿತುಕೊಳ್ಳಬೇಕು. ನಂತರ ಕಣ್ಣುಗಳನ್ನು ಮುಚ್ಚಿ, ನಿಧಾನಕ್ಕೆ ಉಸಿರು ತೆಗೆದು ಬಿಡಿ. ಎಡ ಕೈಯನ್ನು ಜ್ಞಾನ ಮುದ್ರೆಯಲ್ಲಿ ಹಿಡಿದು, ಬಲಗೈಯ ತೋರು ಬೆರಳು ಹಾಗೂ ಮಧ್ಯದ ಬೆರಳನ್ನು ಮಡಚಿ, ನಂತರ ಮೊದಲು ಬಲ ಮೂಗನ್ನು ಮುಚ್ಚಿ ಎಡ ಮೂಗಿನಿಂದ ಉಸಿರು ಎಳೆದು ಬಲಭಾಗದ ಮೂಗಿನಲ್ಲಿ ನಿಧಾನಕ್ಕೆ ಬಿಡಿ.
ನಂತರ ಬಲ ಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದ ಮೂಗಿನಲ್ಲಿ ಬಿಡಿ. ಈ ರೀತಿ 9 ಬಾರಿ ಮಾಡಿ, 9ನೇ ಸುತ್ತಿನಲ್ಲಿ ಎಡಭಾಗದಿಂದ ಉಸಿರನ್ನು ನಿಧಾನಕ್ಕೆ ಬಿಟ್ಟು ಹಾಗೇ ಜ್ಞಾನ ಸ್ಥಿತಿಯಲ್ಲಿ ಕೂರಿ, ಕಣ್ಣುಗಳನ್ನು ಕೂಡಲೇ ತೆಗೆಯಬೇಡಿ. ಕೈಗಳನ್ನು ಒಂದಕ್ಕೊಂದು ಉಜ್ಜಿ, ಆ ಬಿಸಿಯನ್ನು ಕಣ್ಣಿನ ಮೇಲೆ ಇಡಿ, ನಂತರ ನಿಧಾನಕ್ಕೆ ಕಣ್ಣು ಬಿಡಿ. ಯಾರು 5 ನಿಮಿಷ ಈ ನಾಡಿಶೋಧನ ಪ್ರಾಣಾಯಾಮ ಮಾಡುತ್ತಾರೋ ಅವರು ಈ ಪ್ರಯೋಜನಗಳನ್ನು ಪಡೆಯಬಹುದು.
* ನಾಡಿಶೋಧನ ಪ್ರಾಣಾಯಾಮದಲ್ಲಿ ಆಮ್ಲಜನಕ ಹೆಚ್ಚಾಗಿ ದೇಹವನ್ನು ಸೇರುವುದರಿಂದ ದೇಹದಲ್ಲಿರುವ ಕಶ್ಮಲಗಳು ಹೊರ ಹೋಗುತ್ತದೆ.
* ದಿನಪೂರ್ತಿ ಲವಲವಿಕೆಯಿಂದ ಇರಲು ಸಹಾಯ ಮಾಡುತ್ತದೆ.
* ಹೃದಯ ಸಂಬಂಧಿ ಕಾಯಿಲೆ ಇರುವವರು ಈ ಪ್ರಾಣಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
* ಅಲರ್ಜಿ, ಕೆಮ್ಮಿನ ಸಮಸ್ಯೆ ಇರುವವರು ನಾಡಿಶೋಧನ ಪ್ರಾಣಾಯಾಮ ಮಾಡಿದರೆ ಸಮಸ್ಯೆ ಕಡಿಮೆಯಾಗುತ್ತದೆ.
* ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
* ಹಾರ್ಮೋನ್‌ಗಳ ಸಮತೋಲನ ಕಾಪಾಡುತ್ತದೆ.
* ಉಸಿರಾಟದ ಸಮಸ್ಯೆ ಇರುವವರು ಈ ಪ್ರಾಣಾಯಾಮ ಮಾಡಿದರೆ ಸಮಸ್ಯೆ ದೂರವಾಗುತ್ತದೆ