ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ, ಕ್ರಿಕೆಟರ್ಗಳನ್ನು ದೇವರಂತೆ ಆರಾಧಿಸ್ತಾರೆ. ಆದ್ರೆ ದುರದೃಷ್ಟವಶಾತ್ ಉಳಿದ ಕ್ರೀಡೆಗಳು ಮತ್ತು ಕ್ರೀಡಾಪಟುಗಳಿಗೆ ಮಾನ್ಯತೆಯೇ ಸಿಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆಯಷ್ಟೆ ಸಮಾರಂಭವೊಂದರಲ್ಲಿ ಭಾರತದ ಫುಟ್ಬಾಲ್ ತಂಡದ ನಾಯಕನನ್ನೇ ಅವಮಾನಿಸಲಾಗಿತ್ತು.
ಇದೀಗ ಜೂನಿಯರ್ ಕಬಡ್ಡಿ ಆಟಗಾರ್ತಿಯರಿಗೆ ಟಾಯ್ಲೆಟ್ ಒಂದರಲ್ಲಿ ಊಟ ಬಡಿಸಿರೋ ವಿಡಿಯೋ ವೈರಲ್ ಆಗಿದೆ. ಉತ್ತರಪ್ರದೇಶದ ಸಹರನ್ಪುರದಲ್ಲಿ ನಡೆದಿರುವ ಘಟನೆ ಇದು. ಮೂರು ದಿನಗಳ ಅಂಡರ್-17 ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಇವರು ಆಗಮಿಸಿದ್ದರು.
ಜಾಗದ ಕೊರತೆ ಇದೆ ಎಂಬ ಕಾರಣಕ್ಕೆ ಆಟಗಾರ್ತಿಯರಿಗೆ ಟಾಯ್ಲೆಟ್ನಲ್ಲಿ ಊಟ ಬಡಿಸಲಾಗಿದೆ. ಈ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದರೂ ಅಲ್ಲಿನ ಅಧಿಕಾರಿಗಳು ಮಾತ್ರ ಇದನ್ನು ನಿರಾಕರಿಸಿದ್ದಾರೆ. ಮೈದಾನದಲ್ಲಿ ಸ್ಪರ್ಧೆಗಳು ನಡೆಯುತ್ತಿದ್ದುದರಿಂದ ಪೂಲ್ ಬಳಿ ಅಡುಗೆ ಮಾಡಲಾಗಿದೆ.
ಆಟಗಾರ್ತಿಯರಿಗೆ ಉತ್ತಮ ಗುಣಮಟ್ಟದ ಆಹಾರವನ್ನೇ ಬಡಿಸಿದ್ದೇವೆ. ಶೌಚಾಲಯ ಕೊಳಕಾಗಿದ್ದು ಗಮನಕ್ಕೆ ಬಂದಿದ್ದು, ಅದನ್ನು ಸ್ವಚ್ಛ ಮಾಡಿಸಿದ್ದೇವೆ ಅಂತೆಲ್ಲಾ ಸಹರನ್ಪುರದ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಸಮರ್ಥಿಸಿಕೊಂಡಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿರುವ ಸಕ್ಸೇನಾ, ಈ ಬಗ್ಗೆ ತನಿಖಾ ವರದಿಯನ್ನು ಸಲ್ಲಿಸುವುದಾಗಿಯೂ ಹೇಳಿದ್ದಾರೆ.