ಚಂಡೀಗಢ ವಿಶ್ವವಿದ್ಯಾಲಯದ ಘಟನೆ ಅತ್ಯಂತ ದುರದೃಷ್ಟಕರ. ನಮ್ಮ ಸಹೋದರಿಯರೊಂದಿಗೆ ನಿಲ್ಲುವ ಸಮಯವಿದು ಎಂದು ನಟ ಸೋನು ಸೂದ್ ಹೇಳಿದ್ದಾರೆ.
ಪಂಜಾಬ್ ನ ಮೊಹಾಲಿಯ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಕೆಲವು ಆಕ್ಷೇಪಾರ್ಹ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ ಎಂಬ ವದಂತಿಗಳ ಮೇಲೆ ಪ್ರತಿಭಟನೆ ನಡೆದಿದ್ದು, ಪೊಲೀಸರು ಕ್ರಮಕೈಗೊಂಡಿದ್ದಾರೆ.
ಚಂಡೀಗಢದ ಸೋನು ಸೂದ್, ನಮ್ಮ ಸಹೋದರಿಯರೊಂದಿಗೆ ನಿಲ್ಲುವಂತೆ ಜನರಿಗೆ ಮನವಿ ಮಾಡಿದ್ದಾರೆ. ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಘಟನೆಯು ಅತ್ಯಂತ ದುರದೃಷ್ಟಕರವಾಗಿದೆ. ನಾವು ನಮ್ಮ ಸಹೋದರಿಯರೊಂದಿಗೆ ನಿಂತು ಜವಾಬ್ದಾರಿಯುತವಾಗಿ ಸಮಾಜಕ್ಕೆ ಮಾದರಿಯಾಗುವ ಸಮಯ ಬಂದಿದೆ. ಇದು ನಮಗೆ ಪರೀಕ್ಷಾ ಸಮಯವಾಗಿದೆ, ಜವಾಬ್ದಾರರಾಗಿ ವರ್ತಿಸಿರಿ ಎಂದು ಟ್ವೀಟ್ ಮಾಡಿದ್ದಾರೆ.
ಹಲವಾರು ಮಹಿಳಾ ವಿದ್ಯಾರ್ಥಿನಿಯರ ವೀಡಿಯೋಗಳನ್ನು ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ ಎಂಬ ವರದಿಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ, ಬಂಧಿತ ವಿದ್ಯಾರ್ಥಿನಿಯೊಬ್ಬಳು ಹಿಮಾಚಲ ಪ್ರದೇಶದವಳು ಎಂದು ಹೇಳಲಾದ ತನ್ನ ಸ್ವಂತ ವೀಡಿಯೊವನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದಾಳೆ ಎಂಬುದು ಬೆಳಕಿಗೆ ಬಂದಿದ್ದು ತನಿಖೆ ನಡೆದಿದೆ ಎಂದು ಮೊಹಾಲಿ ಹಿರಿಯ ಪೊಲೀಸ್ ಅಧೀಕ್ಷಕ ವಿವೇಕ್ ಶೀಲ್ ಸೋನಿ ಸುದ್ದಿಗಾರರಿಗೆ ತಿಳಿಸಿದರು.