ಇಂದಿನ ಜೀವನ ಶೈಲಿಯಿಂದ ನಾವು ರೋಗಗಳ ಗೂಡಾಗುತ್ತಿರೋದು ಸತ್ಯ. ಅದು ಶಾರೀರಿಕವಾಗಿ ಹಾಗೂ ಮಾನಸಿಕವಾಗಿಯೂ ಹೌದು. ಇತ್ತೀಚಿಗೆ ಬಹುತೇಕರಲ್ಲಿ ಸಾಮಾನ್ಯವಾಗಿ ಕಾಣುತ್ತಿರೋದು ಡಿಪ್ರೆಶನ್. ಖಿನ್ನತೆ ಒಂದು ಮಾನಸಿಕ ಖಾಯಿಲೆ.
2017 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದ ವರದಿ ಪ್ರಕಾರ, ಭಾರತದಲ್ಲಿ ಶೇ. 4.5 ರಷ್ಟು ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಆದರೆ ಇಂದಿನ ದಿನಮಾನಕ್ಕೆ ಅದಕ್ಕಿಂತ ಹೆಚ್ಚಿನ ಜನರು ಖಂಡಿತಾ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಖಿನ್ನತೆಗೆ ಕಾರಣವೇನು ಅನ್ನೋದನ್ನು ನೋಡೋದಾದ್ರೆ, ಸಾಮಾಜಿಕ ಒತ್ತಡ, ಅಸಮಾನತೆ, ಹಣ ಮುಂತಾದವು. ತಜ್ಞರ ಪ್ರಕಾರ ಸಾಮಾಜಿಕ ಶ್ರೇಣಿ ವ್ಯವಸ್ಥೆಗೂ ಆತಂಕ ಹಾಗೂ ಖಿನ್ನತೆ ಮಧ್ಯೆ ನೇರ ಸಂಬಂಧವಿದೆ. ಹೀಗಾಗಿ ಇತ್ತೀಚಿಗೆ ಖಿನ್ನತೆಯನ್ನು ಸಾಮಾಜಿಕ ಆರ್ಥಿಕ ರೋಗ ಅಂತಲೇ ಕರೆಯಲಾಗುತ್ತೆ.
ಮಾನಸಿಕ ಹಾಗೂ ಲೈಂಗಿಕ ಕಿರುಕುಳದ ಹಿನ್ನೆಲೆಯಿಂದ ಸಂಬಂಧಿಸಿದವರ ಮೇಲೆ ಪರಿಣಾಮ ಉಂಟುಮಾಡಿ, ತಮ್ಮಅತ್ಯಂತ ಪ್ರೀತಿಪಾತ್ರರ ಮೇಲಿನ ವಿಶ್ವಾಸ, ಹಿಡಿತವನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರಸವಾನಂತರ ಅಂದರೆ ಮಗುವಿನ ಜನನದ ನಂತರ ಕೆಲವು ಪೋಷಕರಲ್ಲಿ ಖಿನ್ನತೆ ಕಂಡುಬರುತ್ತದೆ.
ಪ್ರೊ. ಪೌಲ್ ಗಿಲ್ಬೆರ್ಟ್ ಹಾಗೂ ಪ್ರೊ. ಕೇಟ್ ಪಿಕ್ಕೆಟ್ ಮತ್ತು ಪ್ರೊ. ರಿಚಾರ್ಟ್ ಜಿ ವಿಲ್ಕಿನ್ ಸನ್ ಪ್ರಕಾರ, ವ್ಯಕ್ತಿಗೆ ತನ್ನ ಅಸ್ವಿತ್ವವನ್ನು ಪ್ರಶ್ನೆ ಮಾಡಿದಾಗ, ಜನ ವ್ಯಕ್ತಿಯೊಬ್ಬನ ಕಾಲೆಳೆದಾಗ ಆತನಿಗೆ ಆತಂಕ ಎದುರಾಗುತ್ತದೆ. ಅಸಮಾನತೆ ಬೆಳೆಯುತ್ತಾ ಹೋದಂತೆ ಖಿನ್ನತೆ ಮತ್ತು ಆತಂಕ ಕೂಡ ಬೆಳೆಯುತ್ತದೆ.