ಬೆಂಗಳೂರು: ಇಂದಿನಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ಕಲಾಪದಲ್ಲಿ ಸರ್ಕಾರದ ಮೇಲಿನ 40% ಕಮಿಷನ್ ಭ್ರಷ್ಟಾಚಾರ ಆರೋಪ ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇದೇ ವೇಳೆ ಸಿದ್ದರಾಮಯ್ಯ ಅವಧಿಯಲ್ಲಿನ ಅಕ್ರಮಗಳ ಪ್ರಸ್ತಾಪಿಸಲು ಬಿಜೆಪಿ ರೆಡಿಯಾಗಿದೆ.
ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಪ್ರಸ್ತಾಪ, ಪಠ್ಯಪುಸ್ತಕ ಪರಿಷ್ಕರಣೆ ಎಡವಟ್ಟು, ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ, ವಿವಿಧೆಡೆ ಹತ್ಯೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಬಿಜೆಪಿ ಸರ್ಕಾರದ ವಿವಿಧ ಲೋಪಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಸಜ್ಜಾಗಿದೆ.
ಇದಕ್ಕೆ ತಿರುಗೇಟು ನೀಡಲು ಬಿಜೆಪಿ ಕೂಡ ಸಿದ್ಧತೆ ಮಾಡಿಕೊಂಡಿದೆ. ಅರ್ಕಾವತಿ ರೀಡು ಪ್ರಕರಣಕ್ಕೆ ಸಂಬಂಧಿಸಿದ ನ್ಯಾ. ಕೆಂಪಣ್ಣ ಆಯೋಗದ ವರದಿ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಸಿಗೆ, ದಿಂಬು ಪೂರೈಕೆಯಲ್ಲಿ ಭ್ರಷ್ಟಾಚಾರ, ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಆಕ್ರಮ, ಕೊಳವೆ ಬಾವಿ ಅವ್ಯವಹಾರ ಮೊದಲಾದವುಗಳನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ. ಅಧಿವೇಶನದಲ್ಲಿ ಕಾಂಗ್ರೆಸ್ ಅಸ್ತ್ರಕ್ಕೆ ಪ್ರತ್ಯಸ್ತ್ರ ಹೂಡಲು ಬಿಜೆಪಿ ಸಜ್ಜಾಗಿದೆ.