ಊಸರವಳ್ಳಿ (ಗೋಸುಂಬೆ) ಬಣ್ಣ ಬದಲಿಸುತ್ತವೆ ಎಂಬುದನ್ನು ಬಹುತೇಕರು ಕೇಳಿರುತ್ತೇವೆ, ಹಲವರು ನೋಡಿರುತ್ತಾರೆ ಕೂಡ.
ಆದರೆ, ಇಲ್ಲಿ ಕಪ್ಪೆಗಳೂ ತಮ್ಮ ಮೈಬಣ್ಣ ಬದಲಾಯಿಸಿಕೊಳ್ಳುತ್ತವೆ. ನೋಡ ನೋಡುತ್ತಿದ್ದಂತೆಯೇ ಎಲ್ಲ ಕಪ್ಪೆಗಳೂ ಕಡುಹಳದಿ ಬಣ್ಣಕ್ಕೆ ತಿರುಗಿಬಿಡುತ್ತವೆ.
ಇದೇನ್ ಕಲಿಗಾಲನಪ್ಪಾ ? ಇದ್ಯಾವ ಕೇಡುಗಾಲದ ಮುನ್ಸೂಚನೆಯಪ್ಪಾ ? ಎಂದೆಲ್ಲ ಆಲೋಚಿಸುತ್ತಿರುವಿರಾ ? ವಿಷಯ ನೀವಂದುಕೊಂಡಂತಲ್ಲ. ಇದು ಪ್ರಕೃತಿ ಸಹಜ ಪ್ರಕ್ರಿಯೆ. ಆದರೆ, ಮನುಷ್ಯರಾದ ನಮಗೆ ವಿಸ್ಮಯದ ವಿಷಯ.
ಕಪ್ಪೆಗಳಿಗೆ ಮಳೆಗಾಲವೆಂದರೆ ಸುಗ್ಗಿ ಹಬ್ಬ. ಸಂಭ್ರಮದ ಕಾಲ. ಸಂತಾನೋತ್ಪತ್ತಿಯ ಸಕಾಲ. ಈ ಕಾಲದಲ್ಲಿ ಗಂಡು ಕಪ್ಪೆಗಳು, ಹೆಣ್ಣು ಕಪ್ಪೆಗಳನ್ನು ಆಕರ್ಷಿಸಿದರಷ್ಟೆ ಅವುಗಳ ವಿರಹ ವೇದನೆಗೊಂದು ವಿರಾಮ ಸಿಗಲು ಸಾಧ್ಯ.
ಹೀಗಾಗಿ ಹೆಣ್ಣು ಕಪ್ಪೆಗಳನ್ನು ಸೆಳೆಯಲು ಕಡುಹಳದಿ ಬಣ್ಣಕ್ಕೆ ತಿರುಗುವ ಗಂಡು ಕಪ್ಪೆಗಳು, ಸ್ವಯಂವರಕ್ಕೆ ಸಿದ್ಧವಾಗಿ ಕೂತುಬಿಡುತ್ತವೆ. ಸಾಲು-ಸಾಲು ಗಂಡು ಕಪ್ಪೆಗಳ ಮೈಬಣ್ಣಕ್ಕೆ ಮಾರು ಹೋಗುವ ಹೆಣ್ಣು ಕಪ್ಪೆಗಳು ಸಂಗಾತಿಯನ್ನು ಸೇರುತ್ತವೆ.
ಈ ವಿಸ್ಮಯದ ವಿಡಿಯೋ ಇದೀಗ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದ್ದು, ಮಧ್ಯಪ್ರದೇಶದ ನರಸಿಂಗಪುರ ಅರಣ್ಯ ವ್ಯಾಪ್ತಿಯಲ್ಲಿ ತಾವು ಕಂಡ ಹಳದಿ ಕಪ್ಪೆಗಳ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಪೋಸ್ಟ್ ಮಾಡಿದ್ದಾರೆ.