ಒಂದು ಪ್ರಕರಣದಲ್ಲಿ ಹೆಪಟೈಟಿಸ್ ಬಿ ವೈರಸ್ ಹೊರತುಪಡಿಸಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈವರೆಗೆ ಐದು ದೃಢಪಡಿಸಿದ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ “ಯಾವುದೇ ದ್ವಿತೀಯ ತೊಡಕುಗಳು ಅಥವಾ ಲೈಂಗಿಕವಾಗಿ ಹರಡುವ ಸೋಂಕುಗಳು” ಪತ್ತೆಯಾಗಿಲ್ಲ ಎಂದು LNJP ಆಸ್ಪತ್ರೆಯ ಸಂಶೋಧಕರು ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ.
ಅಲ್ಲದೆ ಈಗ ವರದಿಯಾಗಿರುವ ಐದು ಪ್ರಕರಣಗಳು ಸೌಮ್ಯದಿಂದ ಮಧ್ಯಮ ದರ್ಜೆಯದ್ದಾಗಿದ್ದು, ಸೋಂಕಿತರು ಮರುಕಳಿಸುವ ಜ್ವರ, ಜನನಾಂಗಗಳು, ತೊಡೆಸಂದು, ಕೆಳಗಿನ ಅಂಗ ಮತ್ತು ಮೇಲಿನ ಅಂಗಗಳ ಮೇಲೆ ಗಾಯದಿಂದ ಬಳಲಿದ್ದರು ಎಂದು ತಿಳಿಸಲಾಗಿದೆ. ಮತ್ತೊಂದು ಮಹತ್ವದ ಸಂಗತಿ ಎಂದರೆ ಈ ಐದು ದೃಢಪಡಿಸಿದ ಮಂಕಿಪಾಕ್ಸ್ ಪ್ರಕರಣಗಳಲ್ಲಿ ಸೋಂಕಿತರಿಗೆ ಅಂತರರಾಷ್ಟ್ರೀಯ ಪ್ರಯಾಣದ ಯಾವುದೇ ಇತಿಹಾಸವಿರಲಿಲ್ಲ.
ಅಧ್ಯಯನದ ಪ್ರಕಾರ ಮಂಕಿಪಾಕ್ಸ್ ಪ್ರಕರಣಗಳು ಸಮುದಾಯದಲ್ಲಿ ಕಡಿಮೆ ರೋಗ ನಿರ್ಣಯವನ್ನು ಸೂಚಿಸುತ್ತಿದ್ದು, ಅದಾಗ್ಯೂ ಪುರುಷರು ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತರು ಇರುವ ಪ್ರದೇಶಗಳಲ್ಲಿ ಹೆಚ್ಚಿನ ಅಪಾಯವಿರುವುದರಿಂದ ಸಕ್ರಿಯ ಕಣ್ಗಾವಲು ಅಗತ್ಯ ಎಂದು ತಿಳಿಸಲಾಗಿದೆ. ಹೀಗಾಗಿ ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವಿವರಿಸಲಾಗಿದೆ.
ಮಂಕಿಪಾಕ್ಸ್ ಒಂದು ವೈರಲ್ ಜನೆಟಿಕ್ ಕಾಯಿಲೆಯಾಗಿದ್ದು ಜ್ವರ, ಚರ್ಮದ ಗಾಯಗಳು, ತಲೆನೋವು, ಸ್ನಾಯು ಬಿಗಿತ, ನಿಶ್ಯಕ್ತಿ, ಶೀತ ಅಥವಾ ಬೆವರು ಮತ್ತು ನೋವಿರುವ ಗಂಟಲು ಹಾಗೂ ಕೆಮ್ಮು ಇದರ ಸಾಮಾನ್ಯ ಲಕ್ಷಣಗಳಾಗಿವೆ. ದೆಹಲಿಯಲ್ಲಿ ವರದಿಯಾದ ಎಲ್ಲ ಪ್ರಕರಣಗಳು ಸೌಮ್ಯವಾಗಿದ್ದು, ಉತ್ತಮ ಚೇತರಿಕೆ ಕಂಡಿವೆ. ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಯನ್ನು ನೋಡಲ್ ಸೌಲಭ್ಯವನ್ನಾಗಿ ಘೋಷಿಸಲಾಗಿದ್ದು ಮಂಕಿಪಾಕ್ಸ್ ಸೋಂಕಿತರಿಗೆ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.