ಹತ್ತು ವರ್ಷಗಳ ಹಿಂದೆ ನಡೆದಿದ್ದ ಅಪಘಾತ ಪ್ರಕರಣ ಒಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಅಪಘಾತದಲ್ಲಿ ಕಾಲು ತುಂಡಾಗಿರುವ ಬಾಲಕಿಗೆ ನೀಡುವ ಪರಿಹಾರ ಮೊತ್ತವನ್ನು 53.7 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದು, ಬಾಲಕಿ ಅಪ್ರಾಪ್ತಳಾಗಿರುವ ಕಾರಣ ಪರಿಹಾರ ಮೊತ್ತದ ಪೈಕಿ 10 ಲಕ್ಷ ರೂಪಾಯಿಗಳನ್ನು ತಕ್ಷಣವೇ ಬಾಲಕಿ ತಂದೆಗೆ ನೀಡಬೇಕು ಹಾಗೂ ಉಳಿದ ಮೊತ್ತವನ್ನು ಆಕರ್ಷಕ ಬಡ್ಡಿ ನೀಡುವ ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಬೇಕು ಎಂದು ಸೂಚಿಸಿದೆ.
ಪ್ರಕರಣದ ವಿವರ: 2012ರ ಏಪ್ರಿಲ್ 19 ರಂದು ಬಾಲಕಿ ತನ್ನ ತಾಯಿಯೊಂದಿಗೆ ಬಳ್ಳಾರಿ ಜಿಲ್ಲೆ ಕುಡುತಿನಿಯ ಅಭಿರುಚಿ ಫ್ಯಾಮಿಲಿ ರೆಸ್ಟೋರೆಂಟ್ ಎದುರು ಹೋಗುವಾಗ ಲಾರಿಯೊಂದು ಡಿಕ್ಕಿ ಹೊಡೆದು ಆಕೆಯ ಬಲಗಾಲಿನ ಮೇಲೆ ಹರಿದಿತ್ತು. ಇದರ ಪರಿಣಾಮವಾಗಿ ಪಕ್ಕೆಲಬು ಮರಿದಿದ್ದು, ತೀವ್ರವಾಗಿ ಹಾನಿಗೊಳಗಾಗಿದ್ದ ಬಲಗಾಲನ್ನು ಕತ್ತರಿಸಲಾಗಿತ್ತು. ಈ ಪ್ರಕರಣದಲ್ಲಿ ಮೋಟಾರ್ ಅಪಘಾತ ಕ್ಲೇಮ್ಸ್ ಟ್ರಿಬ್ಯುನಲ್ 8.9 ಲಕ್ಷ ರೂಪಾಯಿಗಳ ಪರಿಹಾರ ನೀಡಿದ್ದು, ಇದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ 8.9 ಲಕ್ಷ ರೂಪಾಯಿಯಿಂದ ಶೇಕಡ ಆರರ ಬಡ್ಡಿಯನ್ನು ಒಳಗೊಂಡಂತೆ 13.65 ಲಕ್ಷ ರೂಪಾಯಿಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿತ್ತು. ಆದರೆ ಇನ್ನೂ ಹೆಚ್ಚಿನ ಪರಿಹಾರ ಕೋರಿ ಬಾಲಕಿಯ ಪೋಷಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದೀಗ ಸುಪ್ರೀಂ ಕೋರ್ಟ್ ಪರಿಹಾರ ಮೊತ್ತವನ್ನು 53.7 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ. ಈ ಅಪಘಾತದಿಂದ ಬಾಲಕಿ ಶಾಶ್ವತವಾದ ಅಂಗವೈಕಲ್ಯಕ್ಕೆ ಒಳಗಾಗಿದ್ದು, ವೈದ್ಯಕೀಯ ವೆಚ್ಚ ಭರಿಸುವುದರ ಜೊತೆಗೆ ಮಾನಸಿಕ ನೋವನ್ನೂ ಅನುಭವಿಸಿದ್ದಾಳೆ. ಹೀಗಾಗಿ ಪರಿಹಾರ ಮುತ್ತ ಹೆಚ್ಚಿಸುವುದು ಸೂಕ್ತ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.