alex Certify ಚರ್ಮದ ಅಲರ್ಜಿ, ತುರಿಕೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚರ್ಮದ ಅಲರ್ಜಿ, ತುರಿಕೆ ಸಮಸ್ಯೆಗೆ ಇಲ್ಲಿದೆ ಸರಳ ಮನೆಮದ್ದು

ಅಲರ್ಜಿಯಿಂದ ಅನೇಕ ರೀತಿಯ ತ್ವಚೆಯ ಸಮಸ್ಯೆಗಳು ಉದ್ಭವಿಸುತ್ತವೆ. ಅಲರ್ಜಿ ಸಮಸ್ಯೆಗೆ ಪ್ರಮುಖ ಕಾರಣ ಮಾಲಿನ್ಯ. ನಾವು ಬಳಸುವ ಸೌಂದರ್ಯ ವರ್ಧಕಗಳಲ್ಲಿ ಅನೇಕ ರಾಸಾಯನಿಕಗಳು ಕಂಡುಬರುತ್ತವೆ. ಇದು ಕೆಲವರ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ, ಅವುಗಳಿಂದ್ಲೇ ಅಲರ್ಜಿಯಾಗುತ್ತದೆ.

ಚರ್ಮದ ಅಲರ್ಜಿ ತುಂಬಾ ಅಪಾಯಕಾರಿ ಮತ್ತು ದೀರ್ಘಕಾಲದವರೆಗೆ ಕಾಡುತ್ತದೆ. ಅಲರ್ಜಿಯಿಂದಾಗಿ ಕೆಲವೊಮ್ಮೆ ಚರ್ಮದ ಮೇಲೆ ತುರಿಕೆ ಪ್ರಾರಂಭವಾಗುತ್ತದೆ, ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಚರ್ಮವು ಕೆಂಪಗಾಗಿ ಬೊಬ್ಬೆ ಬರುವುದು ಇವೆಲ್ಲ ಸಾಮಾನ್ಯ.

ಅಲರ್ಜಿಯಿಂದ ಬೇರೆ ಬೇರೆ ತೆರನಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಚಿಕಿತ್ಸೆ ಕೂಡ ವಿಭಿನ್ನವಾಗಿರುತ್ತದೆ. ಆದರೆ ಕೆಲವು ಸರಳವಾದ ಮನೆಮದ್ದುಗಳನ್ನು ಅಳವಡಿಸಿಕೊಂಡರೆ, ನೀವು ಅನೇಕ ರೀತಿಯ ಚರ್ಮದ ಅಲರ್ಜಿಗಳಿಂದ ಪರಿಹಾರ ಪಡೆಯಬಹುದು.

ಅಲೋವೆರಾ: ಅಲೋವೆರಾ ಅಲರ್ಜಿಯಿಂದ ಉಂಟಾಗುವ ತುರಿಕೆಯನ್ನು ನಿವಾರಿಸುತ್ತದೆ. ಆದಾಗ್ಯೂ ಅಲೋವೆರಾ ಕೆಲವು ಜನರ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ. ಅಲೋವೆರಾ ಜೆಲ್ ಅನ್ನು ಚರ್ಮದ ಮೇಲೆ ಹಚ್ಚಿ  ಅರ್ಧ ಘಂಟೆ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಅಲರ್ಜಿಯಿಂದಾಗುವ ಸುಡುವ ಸಂವೇದನೆಯನ್ನು ನಿವಾರಿಸುತ್ತದೆ ಮತ್ತು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.

ಆಪಲ್ ಸೈಡರ್ ವಿನೆಗರ್: ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಆಮ್ಲವನ್ನು ಹೊಂದಿದ್ದು, ಅಲರ್ಜಿ ಹೋಗಲಾಡಿಸಲು ಸಹಾಯ ಮಾಡುತ್ತದೆ. ಅಲರ್ಜಿಯಿಂದ ಉಂಟಾಗುವ ತುರಿಕೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ಕಪ್‌ ಬಿಸಿ ನೀರಿಗೆ ಒಂದು ಚಮಚ ಆಪಲ್‌ ಸೈಡರ್‌ ವಿನೆಗರ್‌ ಹಾಕಿ. ಅದರಲ್ಲಿ ಹತ್ತಿಯನ್ನು ಅದ್ದಿ, ಆ ಹತ್ತಿಯನ್ನು ಅಲರ್ಜಿ ಇರುವ ಕಡೆ ಇಟ್ಟುಕೊಳ್ಳಿ. ವಿನೆಗರ್ ಒಣಗುವವರೆಗೆ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ದಿನಕ್ಕೆ ಎರಡು ಬಾರಿ ಬಳಸಬಹುದು, ಆದರೆ ಅದನ್ನು ಬಳಸುವ ಮೊದಲು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಅಡುಗೆ ಸೋಡಾ: ಬೇಕಿಂಗ್ ಸೋಡಾ ಚರ್ಮದ ಪಿಎಚ್ ಅನ್ನು ನಿಯಂತ್ರಿಸುವ ಅಂಶಗಳನ್ನು ಒಳಗೊಂಡಿದೆ. ಇದರ ಬಳಕೆಯಿಂದ ಚರ್ಮದ ಅಲರ್ಜಿ ನಿವಾರಣೆಯಾಗುತ್ತದೆ. ಬೇಕಿಂಗ್ ಸೋಡಾದೊಂದಿಗೆ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ, ಹತ್ತಿಯ ಸಹಾಯದಿಂದ ಅಲರ್ಜಿ ಇರುವ ಜಾಗಕ್ಕೆ ಅನ್ವಯಿಸಿ. 10-15 ನಿಮಿಷಗಳ ನಂತರ ಶುದ್ಧ ನೀರಿನಿಂದ ತೊಳೆಯಿರಿ. ತುರಿಕೆ ಮತ್ತು ಸುಡುವಿಕೆಯಿಂದ ತ್ವರಿತ ಪರಿಹಾರ ಸಿಗುತ್ತದೆ. ಈ ಪೇಸ್ಟ್ ಅನ್ನು ದಿನಕ್ಕೆ 3-4 ಬಾರಿ ಬಳಸಿ.

ತೆಂಗಿನ ಎಣ್ಣೆ : ತೆಂಗಿನೆಣ್ಣೆಯು ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಬೆಚ್ಚಗಿನ ತೆಂಗಿನ ಎಣ್ಣೆಯು ಮುಖವನ್ನು ತೇವಗೊಳಿಸುತ್ತದೆ ಮತ್ತು ಅಲರ್ಜಿಯಿಂದ ಪರಿಹಾರ ನೀಡುತ್ತದೆ. ಬೆಚ್ಚಗಿನ ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಅನ್ವಯಿಸಿ ಮತ್ತು ಒಂದು ಗಂಟೆ ಬಿಡಿ. ಇದು ಚರ್ಮದ ತುರಿಕೆಯನ್ನು ಹೋಗಲಾಡಿಸುತ್ತದೆ. ಅನೇಕ ರೀತಿಯ ಚರ್ಮದ ಅಲರ್ಜಿಗಳಿಂದ ಪರಿಹಾರವನ್ನು ನೀಡುತ್ತದೆ.

ಟೀ ಟ್ರೀ ಆಯಿಲ್‌: ಅಲರ್ಜಿಯಿಂದ ಮುಖ ಕೆಂಪು ಬಣ್ಣಕ್ಕೆ ತಿರುಗುತ್ತಿದ್ದರೆ ಟೀ ಟ್ರೀ ಆಯಿಲ್‌ ಅತ್ಯಂತ ಪ್ರಯೋಜನಕಾರಿ. ಇದು ಆಂಟಿಮೈಕ್ರೊಬಿಯಲ್ ಪದಾರ್ಥಗಳನ್ನು ಹೊಂದಿರುತ್ತದೆ. ಹಾಗಾಗಿ ಅಲರ್ಜಿಯಿಂದ ಪರಿಹಾರ ನೀಡುತ್ತದೆ. ಮೊಡವೆಗಳು, ತುರಿಕೆ ಮುಂತಾದ ಅನೇಕ ಚರ್ಮದ ಸಮಸ್ಯೆಗಳು ಟೀ ಟ್ರೀ ಆಯಿಲ್ ಬಳಕೆಯಿಂದ ನಿವಾರಣೆಯಾಗುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...