ಪ್ರೀತಿ ಕುರುಡು ಅನ್ನೋ ಮಾತಿದೆ. ಅಸ್ಸಾಂನಲ್ಲಿ 15 ವರ್ಷದ ಹುಡುಗಿಯೊಬ್ಬಳು ಇದನ್ನು ಸಾಬೀತು ಮಾಡಲು ಹೊರಟಿದ್ದಾಳೆ. ತನ್ನ ಪ್ರೀತಿ ಎಷ್ಟು ಅಗಾಧವಾದದ್ದು ಅನ್ನೋದನ್ನು ಮನವರಿಕೆ ಮಾಡಿಕೊಡಲು ಎಚ್‌ಐವಿ ಪೀಡಿತ ತನ್ನ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾಳೆ.
ಅಸ್ಸಾಂನ ಸೌಲ್ಕಚಿ ಎಂಬಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಆ ಯುವಕ ಹಾಗೂ 15 ವರ್ಷದ ಬಾಲಕಿ ಫೇಸ್ಬುಕ್ ಮೂಲಕ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ಕಳೆದ ಮೂರು ವರ್ಷಗಳಿಂದ ಇವರು ಪ್ರೀತಿಸುತ್ತಿದ್ದು, ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದಾರಂತೆ.
ಹಲವು ಬಾರಿ ಬಾಲಕಿ ಆತನೊಂದಿಗೆ ಓಡಿ ಹೋಗಿದ್ದಳು. ಆದ್ರೆ ಹೆತ್ತವರು ಅವಳನ್ನು ಮನೆಗೆ ಮರಳಿ ಕರೆತಂದಿದ್ದಾರೆ. ಆದ್ರೆ ಈ ಬಾರಿ ಮಾತ್ರ ಯಾರೂ ಊಹಿಸದಂತಹ ಕೃತ್ಯವನ್ನು ಎಸಗಿದ್ದಾಳೆ. ಯುವಕ ಎಚ್‌ಐವಿ ಪೀಡಿತನಾಗಿದ್ದು, ಆತನ ರಕ್ತವನ್ನು ಸಿರೆಂಜ್ ಮೂಲಕ ಹೊರತೆಗೆದು ಅದನ್ನು ತನ್ನ ದೇಹಕ್ಕೆ ಬಾಲಕಿ ಇಂಜೆಕ್ಟ್ ಮಾಡಿಕೊಂಡಿದ್ದಾಳೆ.
ಈ ಘಟನೆ ಸಾರ್ವಜನಿಕರಿಗೂ ಆಘಾತ ತಂದಿದೆ. ಪ್ರೀತಿ ಎಂಬ ಮಾಯೆಗೆ ಸಿಲುಕಿ ಹದಿಹರೆಯದವರು ಎಂತಹ ಹುಚ್ಚು ಸಾಹಸಕ್ಕೆ ಮುಂದಾಗ್ತಾರೆ ಅನ್ನೋದಕ್ಕೆ ಇದೊಂದು ತಾಜಾ ಉದಾಹರಣೆ. ಸದ್ಯ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಬಾಲಕಿಯ ಹೆತ್ತವರು ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಎಚ್‌ಐವಿ ಪೀಡಿತ ಪ್ರೇಮಿಯ ರಕ್ತವನ್ನು ಇಂಜೆಕ್ಟ್ ಮಾಡಿಕೊಂಡಿರೋ ಬಾಲಕಿಯನ್ನು ವೈದ್ಯರ ನಿಗಾದಲ್ಲಿ ಇಡಲಾಗಿದೆ.