ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೂ ಕೆಲ ದಿನಗಳ ಹಿಂದೆ ಸುಳ್ಯದಲ್ಲಿ ನಡೆದಿದ್ದ ಮತ್ತೊಂದು ಕಗ್ಗೊಲೆ ಪ್ರಕರಣದಲ್ಲಿ ಮುಸ್ಲಿಂ ಯುವಕನೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು.
ಮಸೂದ್ ಎಂಬ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಇದೀಗ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೃತ ಮಸೂದ್ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕಳಂಜೆ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ಮೃತ ಮಸೂದ್ ಕುಟುಂಬದ ದುಃಖ ಆಲಿಸಿದರು. ಕುಟುಂಬದವರಿಗೆ ಸಾಂತ್ವನ ಹೇಳಿದ ಕುಮಾರಸ್ವಾಮಿ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ನೀಡಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕರಾವಳಿ ಜಿಲ್ಲೆಯಲ್ಲಿ ನಡೆದಿರುವ ಸಾಲು ಸಾಲು ಹತ್ಯೆ ಪ್ರಕರಣ ಜನರನ್ನು ಆತಂಕಕ್ಕೀಡು ಮಾಡಿದೆ. ಹಂತಕರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಿ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮತ್ತೆಂದೂ ಮರುಕಳಿಸಬಾರದು ಎಂದು ಹೇಳಿದರು.
ಮಂಗಳೂರಿಗೆ ಆಗಮಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಮಸೂದ್ ಮನೆಗೆ ಭೇಟಿ ನೀಡಿಲ್ಲ. ಇದು ಮುಖ್ಯಮಂತ್ರಿಗಳ ಬೇಜವಾಬ್ದಾರಿತನವಾಗಿದೆ ಎಂದು ಕಿಡಿಕಾರಿದರು. ಮಸೂದ್ ಗೆ ಯಾವುದೇ ರಾಜಕೀಯ ಸಂಘಟನೆ, ಪಕ್ಷಗಳ ಜತೆ ಸಂಬಂಧವಿರಲಿಲ್ಲ. ತುಂಬಾ ಬಡ ಕುಟುಂಬದ ಹುಡುಗನಾಗಿದ್ದ. ಆತನ ಹತ್ಯೆಗೆ ಕಾರಣವೇನು ಎಂಬುದನ್ನು ಪತ್ತೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.