ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷ ನಾಯಕರ ಆರೋಪ-ಪ್ರತ್ಯಾರೋಪಗಳು ಸಮರೋಪಾದಿಯಲ್ಲಿ ಆರಂಭವಾಗಿದೆ. ಹೆಬ್ಬಾಳ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ 30% ಕಮಿಷನ್ ಪಡೆಯುತ್ತಿದ್ದಾರೆ. ಹಣ ಕೊಟ್ಟರೆ ಮಾತ್ರ ಶಾಸಕರು ಕಾಮಗಾರಿ ಪೂಜೆಗೆ ಬರ್ತಾರೆ. 650 ಕೋಟಿ ಕಾಮಗಾರಿಯಲ್ಲಿ ಕೇವಲ ಶೇ.40ರಷ್ಟು ಕೆಲಸ ಆಗಿದೆ. ಭ್ರಷ್ಟಾಚಾರ ಇಲ್ಲದೇ ಯಾವುದೇ ಕೆಲಸ ನಡೆಯುತ್ತಿಲ್ಲ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರದ್ದೇ ಕಾಮಗಾರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಹಕ್ಕು ಪತ್ರಗಳಲ್ಲಿ ನಕಲಿ ಸಹಿ ಆರೋಪ ಕೇಳಿಬಂದಿದೆ. ನಾನು ಶಾಸಕನಾಗಿದ್ದಾಗ ಬಂದಿರುವ ಹಕ್ಕು ಪತ್ರಗಳಿಗೆ ನಕಲಿ ಸಹಿ ಹಾಕುವ ದಂಧೆ ನಡೆಯುತ್ತಿದೆ. ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಎಸಿಬಿ ತನಿಖೆ ನಡೆಸಬೇಕಿದೆ ಎಂದು ಆಗ್ರಹಿಸಿದರು.