ಬೆಂಗಳೂರಿನ ಬಿಬಿಎಂಪಿ ಕಾಲೇಜುಗಳಲ್ಲಿ ಓದ್ತಾ ಇರೋ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯಿದೆ. ಬಿಬಿಎಂಪಿಗೆ ಸೇರಿದ ಪಿಯುಸಿ ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡಲು ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಒಪ್ಪಿಗೆ ಸೂಚಿಸಿದ್ದಾರೆ.
ಇದಕ್ಕಾಗಿ ಬಿಬಿಎಂಪಿ 41.5 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಆರಂಭದಲ್ಲಿ 5000 ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ನೀಡಲಾಗುತ್ತದೆ. ನಂತರ ಉಳಿದ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಸಿಗಲಿದೆ ಅಂತಾ ಪಾಲಿಕೆಯ ವಿಶೇಷ ಆಯುಕ್ತ ರಾಮ್‌ಪ್ರಸಾದ್ ಮನೋಹರ್ ತಿಳಿಸಿದ್ದಾರೆ. ಈ ಯೋಜನೆಗಾಗಿ ಶೀಘ್ರವೇ ಟೆಂಡರ್ ಕರೆಯವುದಾಗಿ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 15 ಪ್ರಿ ಯೂನಿವರ್ಸಿಟಿಗಳು ಹಾಗೂ 4 ಪದವಿ ಕಾಲೇಜುಗಳಿವೆ. ತಲಾ 4,398 ಹಾಗೂ 1,104 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ಎರಡು ಪೋಸ್ಟ್ ಗ್ರಾಜ್ಯುಯೇಟ್ ಕಾಲೇಜುಗಳಿದ್ದು ಅಲ್ಲಿ 71 ವಿದ್ಯಾರ್ಥಿಗಳಿದ್ದಾರೆ. ಎಸ್‌ಸಿಎಸ್ಟಿ, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಸಿಗಲಿದೆ.
ಪಾಲಿಕೆಯ ಈ ಯೋಜನೆ ಅಷ್ಟು ಸಮಂಜಸವಾಗಿಲ್ಲ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪಾಲಿಕೆ ಕಂಪ್ಯೂಟರ್ ಲ್ಯಾಬ್‌ಗಳ ಸ್ಥಾಪನೆ ಮತ್ತು ಹಳೆಯ ಡೆಸ್ಕ್‌ಟಾಪ್‌ಗಳನ್ನು ಬದಲಾಯಿಸುವ ಜೊತೆಗೆ ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳುವಂತಹ ಮೂಲಸೌಕರ್ಯಗಳಿಗೆ ಹೆಚ್ಚಿನ ಹೂಡಿಕೆ ಮಾಡಬೇಕಿತ್ತು. ಕೇವಲ 5,000 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದರಿಂದ ಇತರ ವಿದ್ಯಾರ್ಥಿಗಳನ್ನು ದುರ್ಬಲಗೊಳಿಸಿದಂತಾಗಬಹುದು. ಪಾಲಿಕೆಯ ಅನೇಕ ಕಂಪ್ಯೂಟರ್ ಕೇಂದ್ರಗಳಲ್ಲಿ ಶಿಕ್ಷಕರಿಲ್ಲ ಮತ್ತು ಕೆಲವರು ಸಿ+, ಮೈಕ್ರೋಸಾಫ್ಟ್ ಮತ್ತು ಇತರ ಭಾಷಾ ಕಾರ್ಯಕ್ರಮಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.