ರ್ಯಾಗಿಂಗ್ ಅನ್ನೊ ಪಿಡುಗು ಸಮಾಜದಲ್ಲಿ ಆಳವಾಗಿ ಬೇರೂರಿರುವ ಪಿಡುಗು. ಒಬ್ಬ ವ್ಯಕ್ತಿಗೆ ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ಕೊಟ್ಟು ಇನ್ನೊಬ್ಬರು ಅದನ್ನ ಎಂಜಾಯ್ ಮಾಡುವ ಈ ನೀಚ ಪದ್ಧತಿಯನ್ನ ಎಷ್ಟೆ ಬುಡಸಮೇತ ಕಿತ್ತು ಹಾಕಲು ನೋಡಿದರೂ, ಅದೇ ರ್ಯಾಗಿಂಗ್ ಪ್ರಕರಣ ಮತ್ತೆ ಮತ್ತೆ ಬೆಳಕಿಗೆ ಬರುತ್ತಲೇ ಇದೆ. ಈ ಬಾರಿ ಮತ್ತೆ ಅಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆ ಸಂದರ್ಭದಲ್ಲಿ ಕ್ರೀಡಾಪಟು ದ್ಯುತಿ ಚಂದ್ ತಾವು ಅನುಭವಿಸಿದ ಕಿರುಕುಳದ ನೋವನ್ನ ಈಗ ಬಹಿರಂಗಪಡಿಸಿದ್ದಾರೆ.
ಭಾರತೀಯ ಓಟಗಾರ್ತಿ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆಗಿರೋ ಛಾಪನ್ನ ಮೂಡಿಸಿರುವ ಕ್ರೀಡಾಪಟು. ಇವರು ಭುವನೇಶ್ವರದ ಕ್ರೀಡಾ ವಸತಿನಿಲಯದಲ್ಲಿ ತಂಗಿದ್ದ ದಿನಗಳಲ್ಲಿ ರ್ಯಾಗಿಂಗ್ ಗೆ ಗುರಿಯಾಗಿದ್ದನ್ನ ಮತ್ತು ಅದರ ಪರಿಣಾಮ ತಮ್ಮ ಮೇಲೆ ಏನೇನಾಯ್ತು ಅನ್ನೋದನ್ನ ಹೇಳಿಕೊಂಡಿದ್ದಾರೆ.
ದ್ಯುತಿಚಂದ್ ಇತ್ತೀಚೆಗೆ ಫೇಸ್ಬುಕ್ನಲ್ಲಿ ಬಳಕೆದಾರರ ಪೋಸ್ಟ್ಗೆ ಪ್ರತಿಕ್ರಿಯಿಸುವಾಗ ಈ ಘಟನೆಯ ಕುರಿತು ಪ್ರಸ್ತಾಪ ಮಾಡಿದ್ದಾರೆ. ಅಷ್ಟೇ ಅಲ್ಲ ರ್ಯಾಗಿಂಗ್ ಸಮಯದಲ್ಲಿ ಮಾನಸಿಕವಾಗಿ ಹೇಗೆ ಎದುರಿಸಿದ್ದು ಅಂತ ಕೂಡಾ ವಿವರಿಸಿದ್ದಾರೆ. ಅದರ ಜೊತೆಗೆ ರ್ಯಾಗಿಂಗ್ ಹೇಗೆಲ್ಲ ನಿರಾಕರಿಸಬೇಕು ಅನ್ನುವುದರ ಕುರಿತು ಸಲಹೆ ಕೂಡಾ ಕೊಟ್ಟಿದ್ದಾರೆ.
“ಸ್ಪೋರ್ಟ್ಸ್ ಹಾಸ್ಟೆಲ್ನಲ್ಲಿ ತಮ್ಮ ದೇಹಕ್ಕೆ ಮಸಾಜ್ ಮಾಡಲು ಮತ್ತು ಬಟ್ಟೆ ತೊಳೆಯಲು ನನ್ನ ಸೀನಿಯರ್ಸ್ ನನಗೆ ಒತ್ತಾಯ ಮಾಡುತ್ತಿದ್ದರು. ನಾನು ಅವರನ್ನ ವಿರೋಧಿಸಿದ ಬಳಿಕ ಅವರು ಇನ್ನಷ್ಟು ಕಿರುಕುಳ ನೀಡುತ್ತಿದ್ದರು.“ ಎಂದು ಹೇಳಿದ್ದಾರೆ.
ರ್ಯಾಗಿಂಗ್ ನಿಂದ ಕಟಕ್ನ ಪದವಿಪೂರ್ವ ವಿದ್ಯಾರ್ಥಿನಿ ರುಚಿಕಾ ಮೊಹಾಂತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂತರ ದ್ಯುತಿಚಂದ್ ತನಗೂ ಹಿರಿಯರು ಕೊಡುತ್ತಿದ್ದ ಕಿರುಕುಳದ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ಮೂವರು ಸೀನಿಯರ್ಸ್ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡಿದ್ದು, ಅದರಿಂದ ನೊಂದ ರುಚಿಕಾ ಮೊಹಾಂತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದು ಒಡಿಶಾದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.
ತಮಗಾದ ಭಯಾನಕ ವಿವರಗಳನ್ನ ಹೇಳಿಕೊಂಡಿರುವ ದ್ಯುತಿ “ಈ ಘಟನೆ ನನ್ನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ. ಇಂತಹ ಘಟನೆಗಳ ನಂತರ ಹಾಸ್ಟೆಲ್ನಲ್ಲಿ ಉಳಿದುಕೊಂಡು ಕ್ರೀಡೆಯತ್ತ ಗಮನ ಹರಿಸುವುದು ಕಷ್ಟ“ ಅಂತ ಹೇಳಿದ್ದಾರೆ. “ಇದನ್ನ ನಾನು ಬೇರೆಯವರ ಗಮನಕ್ಕೆ ತಂದರು ಯಾರೂ ಯಾವುದೇ ಕ್ರಮ ಕೈಗೊಳ್ಳದಿರುವುದು ನನಗೆ ಇನ್ನಷ್ಟು ನೋವು ಮಾಡಿತ್ತು“ ಅನ್ನೋದನ್ನ ದ್ಯುತಿಚಂದ್ ತಮ್ಮ ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ.