ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳಸ ಬಳಿಯ ಹೆಬ್ಬಾಳೆ ಸೇತುವೆ ಜಲಾವೃತಗೊಂಡಿದ್ದು, ಪ್ರಸಿದ್ಧ ಯಾತ್ರಾ ಸ್ಥಳ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಒಂದು ಮಾರ್ಗದ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಹೊರನಾಡಿಗೆ ಬರುವವರಿಗೆ ಬದಲಿ ಮಾರ್ಗದ ಬಗ್ಗೆ ಮಾಹಿತಿ ಇಲ್ಲಿದೆ.
ಹೊರನಾಡು ದೇವಸ್ಥಾನ ತಲುಪಲು ಎರಡು ಮಾರ್ಗಗಳಿದ್ದು, ಅದರಲ್ಲಿ ಕಳಸ ಹಾಗೂ ಹೊರನಾಡು ಸಂಪರ್ಕಿಸುವ ಸೇತುವೆ ಭಾರಿ ಮಳೆಯಿಂದ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ಬದಲಾಗಿ ಕಳಸ ಹಾಗೂ ಹಳುವಳ್ಳಿ ಮಾರ್ಗದ ಮೂಲಕ ಹೊರನಾಡನ್ನು ತಲುಪಬಹುದಾಗಿದೆ.
ಚಿಕ್ಕಮಗಳೂರು, ಮಲೆನಾಡು ಕರಾವಳಿ ಜಿಲ್ಲೆಗಳಾದ್ಯಂತ ಎರಡು ಮೂರು ದಿನಗಳಿಂದ ಸತತವಾಗಿ ಮಳೆಯಾಗುತ್ತಿದ್ದು, ಹಲವೆಡೆ ರಸ್ತೆ, ಕೃಷಿ ಭೂಮಿ, ಸೇತುವೆಗಳು ಜಲಾವೃತಗೊಂಡಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಅವಾಂತರದಿಂದಾಗಿ ಭೂಕುಸಿತವುಂಟಾಗುವ ಭೀತಿ ಎದುರಾಗಿದೆ.