ಭಾರೀ ಮಳೆ, ಆಲಿಕಲ್ಲು ಸಹಿತ ಮಳೆ ಬೀಳುವುದನ್ನು ಕಂಡಿದ್ದೇವೆ. ಆದರೆ, ಮೀನಿನ ಮಳೆಯೇ ಸುರಿದರೆ ಹೇಗೆ? ಅಬ್ಬಬ್ಬಾ ! ಇದೇನು ಮೀನಿನ ಮಳೆಯೇ !! ಎಂದು ಹುಬ್ಬೇರಿಸಬೇಡಿ. ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಬಿದ್ದ ಭಾರೀ ಮಳೆಯ ಜೊತೆಗೆ ರಾಶಿ ರಾಶಿ ಸಣ್ಣ ಸಣ್ಣ ಮೀನುಗಳೂ ಬಿದ್ದಿವೆ!
ಭಾರೀ ಚಂಡಮಾರುತ ಬೀಸಿದ ಸಂದರ್ಭದಲ್ಲಿ ಮೀನು, ಕಪ್ಪೆ ಮತ್ತು ಇತರೆ ಜಲಚರಗಳು ಬರುತ್ತವೆ ಎಂದು ನಾವು ಕೇಳಿದ್ದೆವು. ಆದರೆ, ಸ್ಯಾನ್ ಫ್ರಾನ್ಸಿಸ್ಕೋ ಜನರ ಮನೆ ಬಾಗಿಲಲ್ಲೇ ಮೀನಿನ ರಾಶಿ ಬಿದ್ದಿರುವುದು ಆಶ್ಚರ್ಯವನ್ನುಂಟು ಮಾಡಿದೆ.
ಇದೊಂದು ವಿರಳಾತಿ ವಿರಳ ಪ್ರಸಂಗವಾಗಿದೆ. ರಭಸವಾಗಿ ಬೀಳುವ ಗಾಳಿಯಿಂದಾಗಿ ಮೀನು ಸೇರಿದಂತೆ ಇನ್ನಿತರೆ ಸಣ್ಣ ಪ್ರಾಣಿಗಳು ಭೂಮಿಯ ಮೇಲ್ಮೈನಲ್ಲಿ ಸಂಭವಿಸುವ ಪ್ರವಾಹದಿಂದ ನಭಕ್ಕೆ ಹಾರಿ ಮಳೆಯೊಂದಿಗೆ ಮತ್ತೆ ಭೂಮಿಗೆ ಬೀಳುತ್ತವೆ.
ಅದೇ ವಿದ್ಯಾಮಾನ ಈಗ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ನಾಯಿ, ಪಕ್ಷಿಗಳು ಈ ಮೀನುಗಳನ್ನು ಹಿಡಿಯಲು ನಾಮುಂದು ತಾಮುಂದು ಎಂಬಂತೆ ಪೈಪೋಟಿಗೆ ಬಿದ್ದಿವೆ. ಮಳೆಯೊಂದಿಗೆ ಮೀನುಗಳು ಬೀಳುವ ಈ ಅಪರೂಪದ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದ್ದು ಸಾಕಷ್ಟು ವೈರಲ್ ಆಗಿವೆ ಮತ್ತು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅಮೆರಿಕಾದಲ್ಲಿ ಇಂತಹ ಮೀನು ಮಳೆ ಸುರಿಯುವುದು ಹೊಸತೇನಲ್ಲ. ಕಳೆದ ಆರು ತಿಂಗಳ ಹಿಂದಷ್ಟೇ ಟೆಕ್ಸಾಸ್ ನಗರದಲ್ಲಿಯೂ ಮೀನಿನ ಮಳೆ ಸುರಿದಿದ್ದುದನ್ನು ಇಲ್ಲಿ ಸ್ಮರಿಸಬಹುದು.