ಟೆಹರಾನ್: ದಕ್ಷಿಣ ಇರಾನ್‌ನಲ್ಲಿ ಶನಿವಾರ ಮುಂಜಾನೆ 6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ಬಂದರು ನಗರವಾದ ಬಂದರ್ ಅಬ್ಬಾಸ್ ನ ನೈಋತ್ಯಕ್ಕೆ 100 ಕಿಲೋಮೀಟರ್(60 ಮೈಲಿ) ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು USGS ಹೇಳಿದೆ.
ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ, ಭೂಕಂಪವು 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ದಕ್ಷಿಣ ಇರಾನ್ ನಲ್ಲಿ ಭೂಕಂಪದಿಂದಾಗಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ನಂತರ ಆ ಪ್ರದೇಶದಲ್ಲಿ ಭೀತಿ ಆವರಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ), ಬಹ್ರೇನ್ ಮತ್ತು ಕತಾರ್ ನಲ್ಲಿಯೂ ಕಂಪನದ ಅನುಭವವಾಗಿದೆ. ಯುಎಇ ಮತ್ತು ಇತರ ಪ್ರದೇಶಗಳ ನೆಟಿಜನ್ ಗಳು ಭೂಕಂಪದ ಸಮಯದಲ್ಲಿ ನಡುಗುವ ವಸ್ತುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.
ವರದಿಗಳ ಪ್ರಕಾರ, ಶನಿವಾರ ಮುಂಜಾನೆ 3.25 ರ ಸುಮಾರಿಗೆ ಮತ್ತೊಂದು ಭೂಕಂಪ ಸಂಭವಿಸಿದೆ. ಎರಡು ಭೂಕಂಪಗಳ ನಡುವೆ ಕ್ರಮವಾಗಿ 2.43 ಮತ್ತು 3.13 ಕ್ಕೆ 4.6 ಮತ್ತು 4.4 ರ ತೀವ್ರತೆಯ ನಂತರದ ಆಘಾತಗಳು ಸಂಭವಿಸಿವೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಜೂನ್ ನಲ್ಲಿ ಅಫ್ಘಾನಿಸ್ತಾನದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 1000 ಜನ ಸಾವನ್ನಪ್ಪಿದ್ದರು. 1500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.