ವಿಜ್ಞಾನಿಗಳು ಹೊಸದೊಂದು ಆವಿಷ್ಕಾರ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಕೆರಿಬಿಯನ್‌ನಲ್ಲಿ ಅತಿ ದೊಡ್ಡ ಬ್ಯಾಕ್ಟೀರಿಯಾವನ್ನು ಪತ್ತೆ ಮಾಡಿದ್ದಾರೆ. ವರ್ಮಿಸೆಲ್ಲಿ ಆಕಾರದ ಜೀವಿ ಇದಾಗಿದ್ದು, ಬರಿಗಣ್ಣಿನಿಂದ ನೋಡುವಷ್ಟು ದೊಡ್ಡದಾಗಿದೆ. ಈವರೆಗೆ ಬ್ಯಾಕ್ಟೀರಿಯಾಗಳನ್ನು ಸೂಕ್ಷ್ಮದರ್ಶಕಗಳಿಂದಲೇ ವೀಕ್ಷಿಸಬೇಕಿತ್ತು. ಬರಿಗಣ್ಣಿಗೆ ಕಾಣುವಷ್ಟು ದೊಡ್ಡ ಬ್ಯಾಕ್ಟೀರಿಯಾ ಪತ್ತೆಯಾಗಿರುವುದು ಇದೇ ಮೊದಲು.
ಇದರ ಗಾತ್ರ ಮಾನವನ ಕಣ್ಣಿನ ರೆಪ್ಪೆಯ ಕೂದಲಿನಷ್ಟಿದೆ, ಇದು ಸುಮಾರು ಒಂದು ಸೆಂಟಿ ಮೀಟರ್ ಉದ್ದವಾಗಿದೆ. ಸಾಮಾನ್ಯ ಬ್ಯಾಕ್ಟೀರಿಯಾದ ಪ್ರಭೇದವು 1-5 ಮೈಕ್ರೊಮೀಟರ್ ಉದ್ದವಾಗಿರುತ್ತದೆ. ಈ ಪ್ರಭೇದವು ಸರಾಸರಿ 10,000 ಮೈಕ್ರೊಮೀಟರ್‌ಗಳಷ್ಟು (ಒಂದು ಇಂಚುಗಳ ನಾಲ್ಕು-ಹತ್ತನೆಯ ಭಾಗ/1 cm) ಉದ್ದವಿರುತ್ತದೆ. ಕೆಲವು ಅದರ ಎರಡು ಪಟ್ಟು ಉದ್ದವನ್ನು ಹೊಂದಿರುತ್ತವೆ.
ಬ್ಯಾಕ್ಟೀರಿಯಾಗಳು ಏಕಕೋಶೀಯ ಜೀವಿಗಳಾಗಿವೆ. ಗ್ರಹದ ಬಹುತೇಕ ಎಲ್ಲೆಡೆ ವಾಸಿಸುತ್ತವೆ. ಬ್ಯಾಕ್ಟೀರಿಯಾಗಳು ಭೂಮಿಯಲ್ಲಿ ವಾಸಿಸುವ ಮೊದಲ ಜೀವಿಗಳು ಮತ್ತು ಶತಕೋಟಿ ವರ್ಷಗಳ ನಂತರವೂ ರಚನೆಯಲ್ಲಿ ಸರಳವಾಗಿ ಉಳಿದಿವೆ ಎಂದು ಭಾವಿಸಲಾಗಿದೆ. ನಮ್ಮ ದೇಹವು ಬ್ಯಾಕ್ಟೀರಿಯಾದಿಂದ ತುಂಬಿರುತ್ತದೆ. ಅವುಗಳಲ್ಲಿ ಕೆಲವು ರೋಗಗಳನ್ನು ಉಂಟುಮಾಡುತ್ತವೆ.
ಹೊಸದಾಗಿ ಪತ್ತೆ ಮಾಡಿರುವ ಬ್ಯಾಕ್ಟೀರಿಯಾಕ್ಕೆ ಥಿಯೋಮಾರ್ಗರಿಟಾ ಮ್ಯಾಗ್ನಿಫಿಕಾ ಎಂದು ಹೆಸರಿಸಲಾಗಿದೆ. ಈ ಜೀವಿಯು ಇತರ ದೈತ್ಯ ಬ್ಯಾಕ್ಟೀರಿಯಾಗಳಿಗಿಂತ ಸರಿಸುಮಾರು 50 ಪಟ್ಟು ದೊಡ್ಡದಾಗಿದೆ. ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಆವಿಷ್ಕಾರವನ್ನು ವಿವರಿಸಲಾಗಿದೆ. ಈ ಬ್ಯಾಕ್ಟೀರಿಯಾದ ಏಕ ಕೋಶಗಳು ತೆಳುವಾಗಿ ಕೊಳವೆಯಾಕಾರದಲ್ಲಿದ್ದರೂ, ಒಂದು ಸೆಂಟಿಮೀಟರ್‌ಗಿಂತಲೂ ಹೆಚ್ಚು ಉದ್ದವಾಗಿವೆ.
ಗಯಾನಾ ವಿಶ್ವವಿದ್ಯಾನಿಲಯದ ಸಹ-ಲೇಖಕ ಮತ್ತು ಜೀವಶಾಸ್ತ್ರಜ್ಞ ಒಲಿವಿಯರ್ ಗ್ರೋಸ್, 2009 ರಲ್ಲಿ ಗ್ವಾಡೆಲೋಪ್ ದ್ವೀಪಸಮೂಹದಲ್ಲಿ ಈ ಬ್ಯಾಕ್ಟೀರಿಯಾಗಳು ಗುಳಿಬಿದ್ದ ಮ್ಯಾಂಗ್ರೋವ್ ಎಲೆಗಳಿಗೆ ಅಂಟಿಕೊಳ್ಳುತ್ತವೆ ಎಂಬುದನ್ನು ಪತ್ತೆ ಮಾಡಿದ್ದರು. ಜೌಗು ಪ್ರದೇಶದಲ್ಲಿ ಸಿಂಪಿ ಚಿಪ್ಪುಗಳು, ಬಂಡೆಗಳು ಮತ್ತು ಗಾಜಿನ ಬಾಟಲಿಗಳಿಗೆ ಈ ಬ್ಯಾಕ್ಟೀರಿಯಾಗಳು ಅಂಟಿಕೊಂಡಿರುವುದನ್ನು ಗ್ರೋಸ್ ಕಂಡುಹಿಡಿದಿದ್ದರು.
ವಿಜ್ಞಾನಿಗಳು ಇದನ್ನು ಲ್ಯಾಬ್‌ನಲ್ಲಿ ಬೆಳೆಸಲು ಇನ್ನೂ ಸಾಧ್ಯವಾಗಿ. ಆದರೆ ಇದರ ಕೋಶವು ಇತರ ಬ್ಯಾಕ್ಟೀರಿಯಾಗಳಿಗಿಂತ ಅಸಾಮಾನ್ಯವಾದ ರಚನೆಯನ್ನು ಹೊಂದಿದೆ. ಇದರ ಗಾತ್ರ ಏಕೆ ದೊಡ್ಡದಾಗಿದೆ ಎಂಬುದಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸಣ್ಣ ಜೀವಿಗಳಿಂದ ತಿನ್ನಲ್ಪಡುವುದನ್ನು ತಪ್ಪಿಸಲು ಸಹಾಯ ಮಾಡುವ ರೂಪಾಂತರವಾಗಿರಬಹುದು ಎಂದು ಸಹ-ಲೇಖಕ ವೊಲಂಡ್ ಊಹಿಸಿದ್ದಾರೆ.