30 ಕ್ಕೂ ಅಧಿಕ ಶಾಸಕರ ಬಂಡಾಯದಿಂದಾಗಿ ಮಹಾರಾಷ್ಟ್ರದ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಪತನದಂಚಿಗೆ ಬಂದು ನಿಂತಿದೆ. ಏಕನಾಥ್ ಶಿಂಧೆ ನೇತೃತ್ವದಲ್ಲಿ ಗೌಹಾತಿಯಲ್ಲಿ ಬೀಡು ಬಿಟ್ಟಿರುವ ಶಿವಸೇನೆ ಶಾಸಕರುಗಳು ಏಕನಾಥ್ ಅವರೇ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಎಂಬ ತೀರ್ಮಾನ ಕೈಗೊಂಡಿರುವುದರಿಂದಾಗಿ ಪಕ್ಷ ಇಬ್ಬಾಗವಾಗುವ ಹಂತ ತಲುಪಿದೆ.
ಹೀಗಾಗಿ ಸರ್ಕಾರ ಹಾಗೂ ಪಕ್ಷ ಎರಡನ್ನೂ ಉಳಿಸಿಕೊಳ್ಳುವ ಒತ್ತಡದಲ್ಲಿ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರಿದ್ದು, ಏಕನಾಥ್ ಶಿಂಧೆ ಬಯಸಿದರೆ ಅವರಿಗೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ತೊರೆದು ʼಮಾತೋಶ್ರೀʼ ಗೆ ತೆರಳುವ ಮೂಲಕ ಅತೃಪ್ತರಿಗೆ ತಾವು ರಾಜೀನಾಮೆಗೂ ಸಿದ್ದ ಎಂಬ ಪರೋಕ್ಷ ಸಂದೇಶ ನೀಡಿದ್ದಾರೆ.
ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಶಿವಸೇನೆ ಸಂಸದ, ಉದ್ದವ್ ಠಾಕ್ರೆ ಅವರ ಪರಮಾಪ್ತ ಸಂಜಯ್ ರಾವತ್, ಗೌಹಾತಿಯಲ್ಲಿರುವ ಅತೃಪ್ತರ ಪೈಕಿ ನನ್ನೊಂದಿಗೆ 20 ಕ್ಕೂ ಅಧಿಕ ಶಾಸಕರು ಸಂಪರ್ಕದಲ್ಲಿದ್ದಾರೆ. ಅವರುಗಳು ಒತ್ತಡದಲ್ಲಿದ್ದು, ಶೀಘ್ರದಲ್ಲೇ ಪಕ್ಷಕ್ಕೆ ಹಾನಿಯಾಗದಂತಹ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.