ಜಾಗತಿಕ ಡಿಜಿಟಲ್ ಕರೆನ್ಸಿ ಮಾರುಕಟ್ಟೆ ಕುಸಿತದ ಮಧ್ಯೆ ನಕಲಿ ಕ್ರಿಪ್ಟೋ ಕರೆನ್ಸಿ ವಿನಿಮಯ ಕೂಡ ವೇಗ ಪಡೆದುಕೊಂಡಿದೆ. ಈ ವಹಿವಾಟಿನಲ್ಲಿ ಭಾರತೀಯ ಹೂಡಿಕೆದಾರರು ಸುಮಾರು 1000 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಹಲವಾರು ಫಿಶಿಂಗ್ ಡೊಮೇನ್‌ಗಳು ಮತ್ತು ಆಂಡ್ರಾಯ್ಡ್ ಆಧಾರಿತ ನಕಲಿ ಕ್ರಿಪ್ಟೋ ಅಪ್ಲಿಕೇಶನ್‌ಗಳ ಜಾಲಕ್ಕೆ ಸಿಕ್ಕು ಹೂಡಿಕೆದಾರರು ಕೈಸುಟ್ಟುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ಸೈಬರ್ ಸೆಕ್ಯುರಿಟಿ ಕಂಪನಿ ಕ್ಲೌಡ್‌ಸೆಕ್ ಹೇಳಿದೆ.
ಠೇವಣಿ ಮೊತ್ತ ಮತ್ತು ತೆರಿಗೆಯಂತಹ ಇತರ ವೆಚ್ಚಗಳ ಹೊರತಾಗಿ ಇಂತಹ ಹಗರಣದಿಂದ 50 ಲಕ್ಷ ರೂಪಾಯಿ ವಂಚನೆಯಾಗಿರುವ ಬಗ್ಗೆ ಹಣ ಕಳೆದುಕೊಂಡವರೊಬ್ಬರು ಸೈಬರ್ ಸೆಕ್ಯುರಿಟಿ ಕಂಪನಿಯನ್ನು ಸಂಪರ್ಕಿಸಿದ್ದರು. ಇಂಥದ್ದೇ ಕ್ರಿಪ್ಟೋ ವಂಚನೆಗಳ ಮೂಲಕ ಹೂಡಿಕೆದಾರರು ಸಾವಿರ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆಂದು ಕ್ಲೌಡ್‌ಸೆಕ್ ಅಂದಾಜಿಸಿದೆ. ಸದ್ಯ ಕ್ರಿಪ್ಟೋ ಕರೆನ್ಸಿ ಹೂಡಿಕೆದಾರನ್ನು ಹೆಚ್ಚಾಗಿ ಆಕರ್ಷಿಸುತ್ತಿರುವ ಮಾರುಕಟ್ಟೆ. ಹಾಗಾಗಿ ವಂಚಕರು ಕೂಡ ಅದನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಕ್ಲೌಡ್‌ಸೆಕ್ ಸಂಸ್ಥಾಪಕ ಮತ್ತು ಸಿಇಒ ರಾಹುಲ್ ಸಸಿ ಅಭಿಪ್ರಾಯಪಟ್ಟಿದ್ದಾರೆ.
ಹಗರಣ ಹೇಗೆ ನಡೆಯುತ್ತದೆ ?
ಕಾನೂನು ಬದ್ಧ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳನ್ನೇ ಹೋಲುವ ನಕಲಿ ಡೊಮೇನ್‌ಗಳನ್ನು ವಂಚಕರು ಸೃಷ್ಟಿಸಿದ್ದಾರೆ. ಡ್ಯಾಶ್‌ಬೋರ್ಡ್‌ನ ವಿನ್ಯಾಸದಿಂದ ಹಿಡಿದು ಎಲ್ಲವೂ ಅಸಲಿ ಪ್ಲಾಟ್‌ಫಾರ್ಮ್‌ಗಳಂತೆಯೇ ಇರುವುದುರಿಂದ ವಹಿವಾಟು ನಡೆಸುವವರಿಗೆ ತಾವು ಮೋಸ ಹೋಗಬಹುದೆಂಬ ಅನುಮಾನವೇ ಬರುವುದಿಲ್ಲ. ಸಂಭಾವ್ಯ ಬಲಿಪಶುಗಳನ್ನು ನಕಲಿ ಸ್ತ್ರೀ ಪ್ರೊಫೈಲ್ ಮೂಲಕ ಸಂಪರ್ಕಿಸಲಾಗುತ್ತದೆ.
ಅವರೊಂದಿಗೆ ಸ್ನೇಹ ಬೆಳೆಸಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡಲು ಮನವೊಲಿಸುತ್ತಾರೆ. ಅವರಲ್ಲಿ ಇನ್ನಷ್ಟು ಆಸೆ ಹುಟ್ಟಿಸಲು 100 ಡಾಲರ್ ಕ್ರೆಡಿಟ್ ಅನ್ನು ನಿರ್ದಿಷ್ಟ ಕ್ರಿಪ್ಟೋ ವಿನಿಮಯಕ್ಕೆ ಉಡುಗೊರೆಯಾಗಿ ಕೊಡುತ್ತಾರೆ. ಇದರಿಂದ ಹೂಡಿಕೆದಾರರಿಗೆ ವಿಶ್ವಾಸ ಮೂಡುತ್ತದೆ. ಹೆಚ್ಚಿನ ಆದಾಯ ಗಳಿಸಲು ತಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡುವಂತೆ ವಂಚಕರು ಮನವರಿಕೆ ಮಾಡುತ್ತಾರೆ. ಅವರು ವಹಿವಾಟು ಮಾಡುತ್ತಿದ್ದಂತೆ ಅವರ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ಹಣ ವಂಚಕನ ಪಾಲಾಗುತ್ತದೆ.
ಕೆಲವೊಮ್ಮೆ ವಂಚಕರಿಗೆ ಸುಲಭವಾಗಿ ಹೂಡಿಕೆದಾರರ ಖಾತೆಯಲ್ಲಿರುವ ಹಣ ಸಿಗುವುದಿಲ್ಲ. ಆಗೆಲ್ಲ ಸೈಬರ್ ದಾಳಿಕೋರರು ತನಿಖಾಧಿಕಾರಿಗಳಂತೆ ನಟಿಸಿ ಸಂತ್ರಸ್ತರನ್ನು ತಲುಪುತ್ತಾರೆ. ಫ್ರೀಝ್ ಆಗಿರುವ ಖಾತೆ ಮತ್ತು ಅಸೆಟ್‌ಗಳನ್ನು ಹಿಂಪಡೆಯಲು ಇಮೇಲ್ ಮೂಲಕ ಐಡಿ ಕಾರ್ಡ್‌ಗಳ ವಿವರ ಮತ್ತು ಬ್ಯಾಂಕ್ ವಿವರಗಳಂತಹ ಗೌಪ್ಯ ಮಾಹಿತಿಯನ್ನು ಕೊಟ್ಟುಬಿಡುತ್ತಾರೆ. ಇವನ್ನೆಲ್ಲ ಸೈಬರ್ ವಂಚಕರು ಬಳಸಿಕೊಂಡು ಮೋಸ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಅದೇನೇ ಆದ್ರೂ ಕ್ರಿಪ್ಟೋ ಕರೆನ್ಸಿ ಕೊಂಡು ಲಾಭ ಮಾಡಿಕೊಳ್ಳುವ ಭರದಲ್ಲಿ ಹೂಡಿಕೆದಾರರು ವಂಚನೆಗೊಳಗಾಗ್ತಿರೋದು ವಿಪರ್ಯಾಸ.