ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಹಿನ್ನೆಲೆಯಲ್ಲಿ ಬಂಕ್ ಮಾಲೀಕರಿಗೆ ಉಂಟಾದ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 31 ರಂದು ಪೆಟ್ರೋಲ್ ಬಂಕ್ ಮಾಲೀಕರು ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ ಮೇ 31 ರಂದು ಡಿಪೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲಿದೆ. ಒಕ್ಕೂಟದ ಅಧ್ಯಕ್ಷ ಬಸವೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಿಪಿಸಿಎಲ್ ಮತ್ತು ಹೆಚ್.ಪಿ.ಸಿ.ಎಲ್. ಕಂಪನಿಗಳ ನಿರ್ವಹಣೆಯಲ್ಲಿನ ವೈಫಲ್ಯದಿಂದ ಪೆಟ್ರೋಲ್ ಬಂಕ್ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಬೇಡಿಕೆಗೆ ತಕ್ಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಮಾಡುತ್ತಿಲ್ಲ. ಹಿಂದೆ ಸಾಲದ ರೂಪದಲ್ಲಿ ತಂದು ವ್ಯಾಪಾರವಾದ ಬಳಿಕ ಮರುದಿನ ಪಾವತಿಸುವ ವ್ಯವಸ್ಥೆ ಇತ್ತು. ಈಗ ಮೊದಲೇ ಹಣ ಪಾವತಿಸಿ ಖರೀದಿಸಬೇಕಾದ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಕಳೆದ ವಾರ ಪೆಟ್ರೋಲ್ ಬೆಲೆಯನ್ನು 10 ರೂಪಾಯಿ ಕಡಿತ ಮಾಡಿದೆ. ಇದರಿಂದ ಹಿಂದಿನ ದಿನ ಸಾವಿರಾರು ಲೀಟರ್ ತೈಲ ಖರೀದಿಸಿದ್ದ ಪ್ರತಿ ಬಂಕ್ ಗಳ ಮಾಲೀಕರಿಗೆ ಕನಿಷ್ಠ 5 ಲಕ್ಷ ರೂ. ನಿಂದ 25 ಲಕ್ಷ ರೂಪಾಯಿವರೆಗೆ ನಷ್ಟವಾಗಿದ್ದು, ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂದು ಒತ್ತಾಯಿಸಲಾಗಿದೆ.