ಬಿಹಾರದ ಆಡಳಿತರೂಢ ಜೆಡಿಯು ಶಾಸಕನೊಬ್ಬ ಮದುವೆ ಕಾರ್ಯಕ್ರಮದಲ್ಲಿ ನರ್ತಕಿಯ ಜೊತೆ ಕುಣಿದು ಕುಪ್ಪಳಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ ಮುಜುಗರಕ್ಕೆ ಸಿಲುಕುವಂತಾಗಿದೆ.
ಈ ಹಿಂದೆಯೂ ಹಲವು ಬಾರಿ ತಮ್ಮ ನಡವಳಿಕೆಗಳಿಂದ ವಿವಾದಕ್ಕೆ ಸಿಲುಕಿದ್ದ ಭಾಗಲ್ಪುರ ಕ್ಷೇತ್ರದ ಪ್ರತಿನಿಧಿ ಗೋಪಾಲ್ ಮಂಡಲ್, ಇದೀಗ ತಮ್ಮ ಕ್ಷೇತ್ರ ವ್ಯಾಪ್ತಿಯ ಫತೇಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮದುವೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ನರ್ತಕಿ ಮೇಲೆ ನೋಟುಗಳನ್ನು ಎಸೆದಿದ್ದಾರೆ. ಅಷ್ಟೇ ಅಲ್ಲ ಆಕೆಗೆ ಫ್ಲೈಯಿಂಗ್ ಕಿಸ್ ಕೂಡ ಕೊಟ್ಟಿದ್ದಾರೆ.
ಬಳಿಕ ಆಕೆಯೊಂದಿಗೆ ಸ್ಟೆಪ್ ಹಾಕಲು ಶುರು ಮಾಡಿದ ಗೋಪಾಲ್ ಮಂಡಲ್, ಹೀಗೀಗೆ ನೃತ್ಯ ಮಾಡು ಎಂದು ಕೈಸನ್ನೆ ಮಾಡಿದ್ದಾರೆ. ಈ ಹಿಂದೆಯೂ ಗೋಪಾಲ್ ಮಂಡಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಒಳಉಡುಪಿನಲ್ಲಿ ಅಡ್ಡಾಡಿ ಟೀಕೆಗೆ ಗುರಿಯಾಗಿದ್ದರು. ಇದೀಗ ಅವರ ಹೊಸ ಅವತಾರದ ವಿಡಿಯೋ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದೆ.