ಮಾಜಿ ಪ್ರೇಮಿ ಒಳ್ಳೆ ಗೆಳೆಯ ಅಥವಾ ಗೆಳತಿಯಾಗೋಕೆ ಸಾಧ್ಯವಿಲ್ಲ. ಆದ್ರೆ ಒಬ್ಬ ಸ್ನೇಹಿತ ಒಳ್ಳೆ ಪ್ರೇಮಿ ಆಗಬಹುದು. ಗೆಳತಿಯನ್ನು ಜೊತೆಯಲ್ಲಿಟ್ಟುಕೊಂಡು ಸಂಗಾತಿಗಾಗಿ ಹುಡುಕಾಟ ನಡೆಸುವ ಹುಡುಗರಿಗೊಂದು ಸಲಹೆ.
ಪರಿಚಯವಿಲ್ಲದ ಹುಡುಗಿಗೆ ಯಾರೂ ತಾಳಿ ಕಟ್ಟುವುದಿಲ್ಲ. ಆಕೆ ಸ್ವಭಾವ, ಅವಳ ಇಷ್ಟ-ಕಷ್ಟಗಳ ಬಗ್ಗೆ ಮೊದಲೇ ತಿಳಿದುಕೊಳ್ಳಲು ಎಲ್ಲ ಹುಡುಗರೂ ಬಯಸ್ತಾರೆ. ನಂತರ ಮದುವೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಮದುವೆಗಾಗಿ ಹುಡುಗಿ ಹುಡುಕಿ, ಆಕೆ ಸರಿಯಾಗ್ತಾಳೆ ಎಂಬುದನ್ನು ನಿರ್ಧರಿಸಿ ಮದುವೆ ಆಗುವ ಬದಲು, ನಿಮ್ಮ ಸ್ನೇಹಿತೆಗೆ ಮೊದಲು ಪ್ರಿಫರೆನ್ಸ್ ನೀಡಿ. ನಿಮ್ಮ ಗೆಳತಿಯನ್ನು ಕೇಳಿ ನೋಡಿ. ಆಕೆ ಬೇಡ ಎಂದರೆ ಮಾತ್ರ ಬೇರೆ ಹುಡುಗಿಯನ್ನು ಮದುವೆ ಆಗಿ. ಗೆಳತಿಯಷ್ಟು ಒಳ್ಳೆ ಬಾಳ ಸಂಗಾತಿ ನಿಮಗೆ ಸಿಗೋದು ಕಷ್ಟ.
ಪ್ರತಿಯೊಬ್ಬರಲ್ಲೂ ಒಂದು ಒಳ್ಳೆ ಗುಣ, ಒಂದು ಕೆಟ್ಟ ಗುಣ ಇದ್ದೇ ಇರುತ್ತೆ. ಒಳ್ಳೆ ಗುಣ ಎಲ್ಲರ ಕಣ್ಣಿಗೆ ಕಾಣುತ್ತೆ. ಹಾಗೆ ಕೆಟ್ಟ ಗುಣ ಬೇಗ ಎಲ್ಲರ ಕಣ್ಣಿಗೆ ಬೀಳುವುದಿಲ್ಲ. ಅದು ಗೊತ್ತಾದಾಗ ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗಬಹುದು. ಆದ್ರೆ ಸ್ನೇಹಿತೆ ಹಾಗಲ್ಲ. ಆಕೆಗೆ ನಿಮ್ಮ ಎರಡೂ ಮುಖಗಳು ಗೊತ್ತಿರುತ್ತೆ. ಎರಡನ್ನೂ ಸಮಾನವಾಗಿ ಸ್ವೀಕರಿಸ್ತಾಳೆ. ನಿಮ್ಮ ಬೆನ್ನಿಗೆ ನಿಲ್ತಾಳೆ. ಹಾಗಾಗಿ ಸ್ನೇಹಿತೆಗಿಂತ ಉತ್ತಮ ಬಾಳಸಂಗಾತಿ ನಿಮಗೆ ಸಿಗಲು ಸಾಧ್ಯವಿಲ್ಲ.
ನಿಮ್ಮನ್ನು ನಿಮ್ಮ ಗೆಳತಿ ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾಳೆ. ನೀವೂ ಕೂಡ ಆಕೆಯನ್ನು ಅರ್ಥ ಮಾಡಿಕೊಂಡಿರುತ್ತೀರಿ. ಹಾಗಾಗಿ ಮದುವೆಯಾದ ನಂತರ ಮತ್ತೆ ಆಕೆಯನ್ನು ನೀವು, ನಿಮ್ಮನ್ನು ಆಕೆ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಬೇಕು, ಬೇಡ, ವ್ಯವಹಾರಗಳ ಬಗ್ಗೆ ಆಕೆಗೆ ತಿಳಿದಿರುವುದರಿಂದ ಮತ್ತಷ್ಟು ಹೊಂದಿ ನಡೆಯಲು ಆಕೆ ಪ್ರಯತ್ನಿಸುತ್ತಾಳೆ.