ಪಾಟ್ನಾ: ಮಹಿಳೆಯೊಬ್ಬರು ತಮ್ಮ ಫೋನ್ನಲ್ಲಿ ಮಾತನಾಡುತ್ತಾ ತೆರೆದ ಮ್ಯಾನ್ಹೋಲ್ಗೆ ಬಿದ್ದಿರುವ ಆಘಾತಕಾರಿ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದ ವಾರ್ಡ್-56ರ ವ್ಯಾಪ್ತಿಯ ಮಲಿಯಾ ಮಹಾದೇವ್ ಜಲ್ಲಾ ರಸ್ತೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಮಹಿಳೆ ತನ್ನ ಫೋನ್ನಲ್ಲಿ ಮಾತನಾಡುತ್ತಾ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ದವು. ಮಹಿಳೆ ಇ-ರಿಕ್ಷಾದ ಹಿಂದೆಯೇ ಹೋಗುತ್ತಿದ್ದರು, ವಾಹನವು ಅದರ ಮೇಲೆ ಚಲಿಸಿದ್ದರಿಂದ ಹಾಗೂ ಆಕೆ ಫೋನ್ನಲ್ಲಿ ಮಾತನಾಡುತ್ತಾ ಇದ್ದುದರಿಂದ ಮ್ಯಾನ್ಹೋಲ್ ಇರುವುದನ್ನು ಗಮನಿಸಲಿಲ್ಲ. ಮುಂದೆ ಹೆಜ್ಜೆ ಇಡುತ್ತಿದ್ದಂತೆ ಆಕೆ ತೆರೆದ ಮ್ಯಾನ್ಹೋಲ್ನ ಕೆಳಭಾಗಕ್ಕೆ ಬಿದ್ದಿದ್ದಾಳೆ.
ಮಹಿಳೆ ಮ್ಯಾನ್ಹೋಲ್ಗೆ ಬೀಳುತ್ತಿದ್ದಂತೆ ಸಮೀಪದಲ್ಲಿದ್ದ ಜನರು ಕೂಡಲೇ ಆಕೆಯನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಆಕೆಯ ಸುತ್ತಲೂ ಗುಂಪು ಜಮಾಯಿಸಿದೆ. ಕೆಲವರು ಅವಳತ್ತ ಕೈ ಚಾಚಿ ಅವಳನ್ನು ಹಿಂದಕ್ಕೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯನ್ನು ರಕ್ಷಿಸಿದ ನಂತರ ಮ್ಯಾನ್ಹೋಲ್ ಅನ್ನು ದೊಡ್ಡ ಹೆಂಚಿನ ತುಂಡಿನಿಂದ ಜನರು ಮುಚ್ಚಿದ್ದಾರೆ.
ವರದಿಗಳ ಪ್ರಕಾರ, ಒಳಚರಂಡಿ ಕಾಮಗಾರಿಯಿಂದಾಗಿ ಮ್ಯಾನ್ಹೋಲ್ ತೆರೆದಿದ್ದರೂ ನಂತರ ಮುಚ್ಚಿರಲಿಲ್ಲ. ಸ್ಥಳೀಯರು ಹಲವು ಬಾರಿ ದೂರು ನೀಡಿದರೂ ಪುರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪಾಟ್ನಾದ ಅನೇಕ ಬೀದಿಗಳಲ್ಲಿ ಈ ಪರಿಸ್ಥಿತಿ ಪ್ರಚಲಿತವಾಗಿದೆ ಎಂದು ಹೇಳಲಾಗಿದೆ. ನಗರದಲ್ಲಿ ತೆರೆದ ಮ್ಯಾನ್ಹೋಲ್ಗಳು ಮಾಮೂಲಿಯಾಗಿವೆ. ಜನರನ್ನು ಎಚ್ಚರಿಸಲು ಬ್ಯಾರಿಕೇಡ್ಗಳಿಲ್ಲದ ಕಾರಣ ರಾತ್ರಿಯ ಸಮಯದಲ್ಲಿ ದಾರಿಹೋಕರು ಸುಲಭವಾಗಿ ಬೀಳುವ ಸಾಧ್ಯತೆಯಿರುತ್ತದೆ.