ಶತ್ರುಗಳ ಜೊತೆಯಲ್ಲ ಹವಾಮಾನದ ಜೊತೆ ಹೋರಾಡುವ ಯುದ್ಧ ಭೂಮಿ ಸಿಯಾಚಿನ್. ವಿಶ್ವದ ಅತ್ಯಂತ ಎತ್ತರದಲ್ಲಿರುವ ಯುದ್ಧ ಭೂಮಿ ಸಿಯಾಚಿನ್. ಈ ಪದದ ಅರ್ಥ ನೋಡುವುದಾದರೆ, ಸಿಯಾ ಅಂದ್ರೆ ಗುಲಾಬಿ. ಚಿನ್ ಎಂದ್ರೆ ಪ್ರದೇಶ. ಗುಲಾಬಿ ವ್ಯಾಲಿ ಕಣಿವೆ ಎನ್ನಬಹುದು.
ಸಿಯಾಚಿನ್ ನಲ್ಲಿ ತಾಪಮಾನ ಮೈನಸ್ 50 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಸಿಯಾಚಿನ್ ನಲ್ಲಿ ಭಾರತೀಯ ಸೈನಿಕರ ಚೆಕ್ ಪಾಯಿಂಟ್ ಬಹಳ ದೂರದಲ್ಲಿದೆ. ಅದಕ್ಕೆ ಇಂದ್ರ ಕಾಲ್ ಎಂದು ಹೆಸರು. ಸೈನಿಕರಿಗೆ ಅದನ್ನು ತಲುಪಲು 20-22 ದಿನ ಬೇಕಾಗುತ್ತದೆ.
ಚೆಕ್ ಪಾಯಿಂಟ್ ಗೆ ಹೋಗುವ ಸೈನಿಕರು ಒಬ್ಬರ ಹಿಂದೆ ಒಬ್ಬರು ಹೋಗುತ್ತಾರೆ. ಒಂದು ಹಗ್ಗದಲ್ಲಿ ಎಲ್ಲರ ಒಂದು ಕೈಯನ್ನು ಕಟ್ಟಿ ಹಾಕಿರಲಾಗುತ್ತದೆ. ಹಿಮದಲ್ಲಿ ಕಂದಕ ಎಲ್ಲಿದೆ ಎಂಬುದು ತಿಳಿಯುವುದಿಲ್ಲ. ಒಬ್ಬ ವ್ಯಕ್ತಿ ಕಂದಕದಲ್ಲಿ ಬಿದ್ದರೆ ಉಳಿದವರು ರಕ್ಷಣೆ ಮಾಡಲಿ ಎಂಬ ಕಾರಣಕ್ಕೆ ಹಗ್ಗ ಕಟ್ಟಲಾಗುತ್ತದೆ.
ಆಮ್ಲಜನಕ ಕಡಿಮೆ ಇರುವ ಕಾರಣ ಅವರು ನಿಧಾನವಾಗಿ ಚಲಿಸಬೇಕಾಗುತ್ತದೆ. ಮಧ್ಯ ಮಧ್ಯದಲ್ಲಿ ಕುಳಿತು ಅವರು ಮುಂದೆ ಸಾಗುತ್ತಾರೆ. ಆದ್ರೆ ಅದಕ್ಕೂ ಸಮಯ ನಿಗದಿ ಮಾಡಿಕೊಂಡಿರುತ್ತಾರೆ. ಸೈನಿಕರ ಡ್ರೆಸ್ ಜೊತೆಗೆ ಸ್ನೋ ಕೋಟನ್ನು ಅವರು ಧರಿಸಿರುತ್ತಾರೆ.
ಸ್ಲೀಪಿಂಗ್ ಚೀಲದಲ್ಲಿ ಸೈನಿಕರು ಮಲಗ್ತಾರೆ. ಆದ್ರೆ ಸರಿಯಾಗಿ ನಿದ್ದೆ ಮಾಡುವಂತೆಯೂ ಇಲ್ಲ. ಆಮ್ಲಜನಕ ಕಡಿಮೆಯಾಗಿ ನಿದ್ದೆಯಲ್ಲಿಯೇ ಸಾವನ್ನಪ್ಪುವ ಸಾಧ್ಯತೆ ಇದೆ. ಹಾಗಾಗಿ ಆಗಾಗ ಏಳಬೇಕಾಗುತ್ತದೆ.
ಸ್ನಾನ ಮಾಡುವುದಂತೂ ಸಾಧ್ಯವಿಲ್ಲದ ಮಾತು. ದಾಡಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಯಾಕೆಂದ್ರೆ ಚರ್ಮ ಮೆದುವಾಗಿರುವುದರಿಂದ ದಾಡಿ ಮಾಡುವ ವೇಳೆ ರಕ್ತ ಬಂದರೆ ಸುಲಭವಾಗಿ ನಿಲ್ಲುವುದಿಲ್ಲ.