ಮಾಹಿತಿ ಹಕ್ಕು ಕಾಯ್ದೆಯಡಿ ಸರ್ಕಾರಿ ಇಲಾಖೆಗಳಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆಯುತ್ತಿದ್ದ ಆರ್.ಟಿ.ಐ. ಕಾರ್ಯಕರ್ತ ಹೆಚ್.ಎಂ. ವೆಂಕಟೇಶ್ ಎಂಬವರ ಮೇಲೆ ಗ್ಯಾಂಗ್ ಒಂದು ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಇನ್ಸ್ ಪೆಕ್ಟರ್ ಅವರ ಸಮಯಪ್ರಜ್ಞೆಯಿಂದ ವೆಂಕಟೇಶ್ ಪಾರಾಗಿದ್ದಾರೆ.
ಬೆಂಗಳೂರಿನ ನ್ಯಾಯಾಂಗ ಬಡಾವಣೆ ಬಳಿ ಈ ಘಟನೆ ನಡೆದಿದ್ದು, ವೆಂಕಟೇಶ್ ಅವರ ಕಾರನ್ನು ಅಡ್ಡಗಟ್ಟಿದ ಗ್ಯಾಂಗ್ ಅವರ ಮೇಲೆ ಹಲ್ಲೆಗೆ ಮುಂದಾಗಿದೆ. ಆದರೆ ಇದೇ ಸಂದರ್ಭದಲ್ಲಿ ಆ ಮಾರ್ಗವಾಗಿ ಬರುತ್ತಿದ್ದ ಯಲಹಂಕ ಠಾಣೆ ಇನ್ಸ್ ಪೆಕ್ಟರ್ ಸತ್ಯನಾರಾಯಣ ಕೂಡಲೇ ತಮ್ಮ ಜೀಪ್ ನಿಲ್ಲಿಸಿ ವೆಂಕಟೇಶ್ ಅವರ ರಕ್ಷಣೆಗೆ ಧಾವಿಸಿದ್ದಾರೆ.
ಇನ್ಸ್ ಪೆಕ್ಟರ್ ಸತ್ಯನಾರಾಯಣ ಅವರನ್ನು ಕಂಡ ಗ್ಯಾಂಗ್ ಅಲ್ಲಿಂದ ಪರಾರಿಯಾಗಿದ್ದು, ಆರ್.ಟಿ.ಐ. ಕಾರ್ಯಕರ್ತ ವೆಂಕಟೇಶ್ ಕೂಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ವೆಂಕಟೇಶ್ ಅವರ ಮೇಲೆ ಎರಡು ಬಾರಿ ಹಲ್ಲೆಗೆ ಯತ್ನಿಸಲಾಗಿತ್ತೆನ್ನಲಾಗಿದೆ.