ಮೃತ್ಯು ಎನ್ನುವುದು ಯಾವ ಸಂದರ್ಭದಲ್ಲಿ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಈ ಕೆಳಕಂಡ ಘಟನೆಯೇ ಸಾಕ್ಷಿ. ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ತಾವು ಇಳಿಯಬೇಕಿದ್ದ ಸ್ಥಳ ಹತ್ತಿರದಲ್ಲಿದೆ ಎಂಬ ಕಾರಣಕ್ಕೆ ಚೈನ್ ಎಳೆದು ರೈಲು ನಿಲ್ಲಿಸಿ ಹಳಿಗಳ ಮೇಲೆ ಹೋಗುತ್ತಿದ್ದ ವೇಳೆ ಮತ್ತೊಂದು ರೈಲಿಗೆ ಬಲಿಯಾಗಿದ್ದಾರೆ.
ಇಂತಹದೊಂದು ದಾರುಣ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದ್ದು, ಸಿಕಂದರಾಬಾದ್ – ಗುವಾಹಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರು ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ.
ಬಳಿಕ ತಾವು ತಲುಪಬೇಕಾದ ಸ್ಥಳಕ್ಕೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಭುವನೇಶ್ವರ – ಮುಂಬೈ ಕೊನಾರ್ಕ್ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಅವರುಗಳ ಮೃತ ದೇಹಗಳು ಗುರುತಿಸಲಾಗದಷ್ಟು ಚೆಲ್ಲಾಪಿಲ್ಲಿಯಾಗಿದ್ದವು ಎಂದು ಹೇಳಲಾಗಿದೆ.