ಅಸ್ಸಾಂನಲ್ಲಿ ವಿಷಕಾರಿ ಅಣಬೆ ಸೇವಿಸಿ ಮಗು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. ದಿಬ್ರುಗಢ್‌ನಲ್ಲಿರೋ ಕಾಡು ಅಣಬೆ ಸೇವಿಸಿದ್ದವರ ಪೈಕಿ 13 ಜನರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಣಬೆ ತಿಂದವರ ಪೈಕಿ ಇನ್ನು ಕೆಲವರು ಅಸ್ವಸ್ಥರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರನ್ನೆಲ್ಲ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೂರ್ವ ಅಸ್ಸಾಂನ ಚರೈಡಿಯೊ, ದಿಬ್ರುಗಢ್, ಶಿವಸಾಗರ್ ಮತ್ತು ತಿನ್ಸುಕಿಯಾ ಜಿಲ್ಲೆಗಳ ಚಹಾ ತೋಟದ ಸಮುದಾಯದ 35 ಜನರನ್ನು ಕಳೆದ ಐದು ದಿನಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಅಣಬೆಯನ್ನು ಸೇವಿಸಿದ ನಂತರ ಅಸ್ವಸ್ಥರಾಗಿದ್ದಾರೆ ಎಂದು ವೈದ್ಯಕೀಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ದಾಖಲಾದ 35 ಮಂದಿಯಲ್ಲಿ ಕಳೆದ 24 ಗಂಟೆಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ. ಪ್ರತಿ ವರ್ಷವೂ ಇಂತಹ ಕಾಡು ಅಣಬೆ ತಿಂದು ಅನೇಕರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಸಾವು ಕೂಡ ಸಂಭವಿಸುತ್ತಿದೆ.
ವಿಷಕಾರಿ ಕಾಡು ಅಣಬೆಯನ್ನು ಗುರುತಿಸುವುದು ಅಸಾಧ್ಯವಾಗಿರುವುದೇ ಈ ದುರಂತಕ್ಕೆ ಕಾರಣ. ಜಗತ್ತಿನಲ್ಲಿ ಅನೇಕ ರೀತಿಯ ವಿಷಕಾರಿ ಅಣಬೆಗಳು ಕಂಡುಬರುತ್ತವೆ. ಅವುಗಳನ್ನು ತಿಂದರೆ ಅಪಾಯ ಗ್ಯಾರಂಟಿ. ಸಮಯಕ್ಕೆ ಚಿಕಿತ್ಸೆ ಸಿಗದೇ ಇದ್ದರೆ ಸಾವಿಗೆ ಕಾರಣವಾಗಬಹುದು. ಇವುಗಳ ಸೇವನೆಯಿಂದ ಜನರು ದೃಷ್ಟಿ ಕಳೆದುಕೊಳ್ತಾರೆ. ಕೆಲವೊಮ್ಮೆ ಮೂತ್ರಪಿಂಡಗಳಿಗೂ ಹಾನಿಯಾಗುತ್ತದೆ.