ಶಿವಮೊಗ್ಗ: 2019-2020 ರಲ್ಲಿ ಶಿವಮೊಗ್ಗ -ರೇಣಿಗುಂಟ(ತಿರುಪತಿ) ಹಾಗೂ ಶಿವಮೊಗ್ಗ-ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವಾರಕ್ಕೆ ಎರಡು ಭಾರಿ ಸಂಚರಿಸುವ ರೈಲು ಸೇವೆಗಳನ್ನು ಆರಂಭಿಸಲಾಗಿತ್ತು. ಕೋವಿಡ್ ಸಾಂಕ್ರಾಂಮಿಕ ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೇಶದಾದ್ಯಂತ ರೈಲು ಸೇವೆಗಳನ್ನು ನಿಲುಗಡೆ ಮಾಡಿದ ಸಂದರ್ಭದಲ್ಲಿ ಈ ಎರಡು ರೈಲು ಸೇವೆಗಳನ್ನು ಸಹ ರೈಲ್ವೆ ಇಲಾಖೆಯಿಂದ ಹಿಂಪಡೆಯಲಾಗಿತ್ತು.
ಈ ಹಿಂದೆ ಶಿವಮೊಗ್ಗದಿಂದ ತಿರುಪತಿಗೆ ಹೊರಡುವ ರೈಲು ಬೆಳಿಗ್ಗೆ ಶಿವಮೊಗ್ಗದಿಂದ ಹೊರಟು ರಾತ್ರಿ 8 ಗಂಟೆಗೆ ರೇಣಿಗುಂಟವನ್ನು ತಲುಪಿ ಅರ್ಧ ಗಂಟೆಯ ನಂತರ ಕೂಡಲೇ ಶಿವಮೊಗ್ಗಕ್ಕೆ ಮರು ಪ್ರಯಾಣವನ್ನು ಆರಂಭಿಸುತ್ತಿತ್ತು. ಇದರಿಂದಾಗಿ ಮಲೆನಾಡಿನ ಭಾಗದ ಯಾತ್ರಾರ್ಥಿಗಳಿಗೆ ಈ ರೈಲಿನಿಂದ ಹೆಚ್ಚಿನ ಅನುಕೂಲವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ-ಬೆಂಗಳೂರು ಚೆನ್ನೈ ಎಕ್ಸ್ ಪ್ರೆಸ್ ಹಾಗೂ ಶಿವಮೊಗ್ಗ-ರೇಣಿಗುಂಟ(ತಿರುಪತಿ) ರೈಲುಗಳನ್ನು ಒಗ್ಗೂಡಿಸಿ ಶಿವಮೊಗ್ಗದಿಂದ ತಿರುಪತಿ ಹಾಗೂ ಚೆನ್ನೈ ಗೆ ತೆರಳುವ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲಿನ ಸಮಯ ಹಾಗೂ ಮಾರ್ಗವನ್ನು ಬದಲಿಸಿ ಶಿವಮೊಗ್ಗ-ರೇಣಿಗುಂಟ-ಚೆನ್ನೈ ಎಕ್ಸ್ ಪ್ರೆಸ್ ರೈಲು ಸೇವೆ ಆರಂಭಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ರೈಲ್ವೆ ಸಚಿವರಿಗೆ ಹಲವಾರು ಬಾರಿ ಒತ್ತಾಯಿಸಿದ್ದರು.
ಸಂಸದರ ಪ್ರಯತ್ನದ ಫಲವಾಗಿ ಏ. 17 ರಿಂದ ಶಿವಮೊಗ್ಗ-ಮದ್ರಾಸ್-ಶಿವಮೊಗ್ಗ(ವಯಾ-ರೇಣಿಗುಂಟ(ತಿರುಪತಿ) ಎಕ್ಸ್ ಪ್ರೆಸ್ ರೈಲು ಸೇವೆಯು ಆರಂಭಗೊಳ್ಳುತ್ತಿದೆ.
ಶಿವಮೊಗ್ಗದಿಂದ ಭಾನುವಾರ ಹಾಗೂ ಮಂಗಳವಾರ ಮತ್ತು ಚೆನ್ನೈ ನಿಂದ ಸೋಮವಾರ ಮತ್ತು ಬುಧವಾರಗಳಂದು ಈ ರೈಲು ಸಂಚರಿಸಲಿದೆ.
ವಾರಕ್ಕೆ ಎರಡು ದಿನ ಸಂಚರಿಸುವ ಈ ರೈಲು ಸೇವೆಯು ಶಿವಮೊಗ್ಗದಿಂದ ಸಂಜೆ 7 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.20 ಗಂಟೆಗೆ ರೇಣಿಗುಂಟವನ್ನು ಹಾಗೂ 11.10 ಕ್ಕೆ ಚೆನ್ನೈ ತಲುಪುತ್ತದೆ, ಅದೇ ದಿನ ಮದ್ರಾಸ್ ನಿಂದ ಸಂಜೆ 3.50ಕ್ಕೆ ಹೊರಡುವ ಈ ರೈಲು ರೇಣಿಗುಂಟಕ್ಕೆ ಸಂಜೆ 6.10 ಕ್ಕೆ ತಲುಪಿ ಮರುದಿನ ಬೆಳಿಗ್ಗೆ 7.55ಕ್ಕೆ ಶಿವಮೊಗ್ಗ ತಲುಪಲಿದೆ.
ಮಲೆನಾಡು, ಕರಾವಳಿ ಹಾಗೂ ಶಿವಮೊಗ್ಗ ಭಾಗದ ಜನರು ರೇಣಿಗುಂಟಕ್ಕೆ ಮುಂಜಾನೆ ತಲುಪಿ ಸಂಜೆಯ ವೇಳೆಗೆ ತಿರುಪತಿಯಲ್ಲಿ ದೇವರ ದರ್ಶನ ಪಡೆದು ಅದೇದಿನ ರಾತ್ರಿ ಶಿವಮೊಗ್ಗ ಮರುಪ್ರಯಾಣ ಆರಂಭಿಸಲು ಈ ಬದಲಾದ ಸಮಯ ನೆರವಾಗಲಿದೆ. ಈ ಮೊದಲಿನ ರೈಲು ಸೇವೆಯು ಶಿವಮೊಗ್ಗದಿಂದ ಮುಂಜಾನೆ ತನ್ನ ಪ್ರಯಾಣವನ್ನು ಆರಂಭಿಸುತ್ತಿರುವುದರಿಂದ ಶಿವಮೊಗ್ಗದಿಂದ ತಿರುಪತಿಗೆ ತೆರಳಲು ಬಯಸುತ್ತಿದ್ದ ಯಾತ್ರಾರ್ಥಿಗಳು ಇಡೀ ದಿನವನ್ನು ರೈಲಿನಲ್ಲಿ ಕಳೆಯ ಬೇಕಾಗಿತ್ತು. ಬದಲಾದ ಸಮಯದ ಈ ರೈಲು ಸೇವೆಯಿಂದ ರಾತ್ರಿಯ ಪ್ರಯಾಣ(over night)ದ ಮೂಲಕ ತಿರುಪತಿ ತಲುಪಬಹುದಾಗಿದೆ.
ಈ ರೈಲು ಸೇವೆಯಿಂದ ಮಲೆನಾಡಿನ ಜನತೆಯು ಚಿತ್ರದುರ್ಗ, ಬಳ್ಳಾರಿ, ಗುಂತಕಲ್ ಮೂಲಕ ರೇಣಿಗುಂಟ ಹಾಗೂ ಚೆನ್ನೈ ನೊಂದಿಗೆ ಸಂಪರ್ಕ ಹೊಂದಲು ಸಾಧ್ಯವಾಗಲಿದೆ.
ಈ ರೈಲು ಮಾರ್ಗದಲ್ಲಿ ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಕೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಗುತ್ತಿ, ಯರಗುಂಟ, ಕಡಪ, ರಾಯಪೇಟ, ರೇಣಿಗುಂಟ, ಅರಕೋಣಂ, ಪರಂಬೂರ್ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.