55 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆಂದು ಭಾವಿಸಿ ಭಾನುವಾರ ಸಂಜೆ ಸಂಬಂಧಿಕರು ಮಣ್ಣು ಮಾಡಿದರೆ, ಸೋಮವಾರದಂದು ಆ ವ್ಯಕ್ತಿಯು ಜೀವಂತವಾಗಿ ಮನೆಗೆ ಮರಳಿದ ಘಟನೆಯು ತಮಿಳುನಾಡಿನ ಈರೋಡ್ ಬಳಿಯ ಬನಗಲಾದಪುರದಲ್ಲಿ ನಡೆದಿದೆ.
ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ಮೂರ್ತಿ ಕಬ್ಬು ಕಟಾವು ಮಾಡಲು ಕೆಲವು ದಿನಗಳ ಹಿಂದೆ ತಿರುಪುರಕ್ಕೆ ಹೋಗಿದ್ದರು ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಮೂರ್ತಿ ಪುತ್ರ ಕಾರ್ತಿಗೆ ತಂದೆ ಹತ್ತಿರದ ಬಸ್ ನಿಲ್ದಾಣದಲ್ಲಿ ಶವವಾಗಿ ಮಲಗಿದ್ದಾರೆ ಎಂಬ ಕರೆ ಬಂದಿತ್ತು.
ಕೂಡಲೇ ಸ್ಥಳಕ್ಕೆ ಧಾವಿಸಿದ ಪುತ್ರ ಅದು ತನ್ನ ತಂದೆಯದ್ದೇ ಮೃತದೇಹ ಎಂದು ಗುರುತಿಸಿದ್ದಾನೆ. ಸತ್ಯಮಂಗಳಂ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮಾತ್ರವಲ್ಲದೇ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಇದಾದ ಬಳಿಕ ಭಾನುವಾರ ಸಂಜೆ ಮೂರ್ತಿ ಅಂತ್ಯಕ್ರಿಯೆಯನ್ನು ನಡೆಸಲಾಗಿತ್ತು.
ಆದರೆ ಸೋಮವಾರ ಸಂಜೆ ಸುಮಾರಿಗೆ ಮೂರ್ತಿ ತನ್ನ ಮನೆಗೆ ಮರಳಿದ್ದು ಕುಟುಂಬಸ್ಥರೆಲ್ಲ ಶಾಕ್ ಆಗಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಪುತ್ರ ಕಾರ್ತಿ, ಒಮ್ಮೆಲೆ ನನ್ನ ಕಣ್ಣನ್ನು ನನಗೆ ನಂಬಲು ಆಗಲಿಲ್ಲ. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಗಿತ್ತು. ಇದೀಗ ನನ್ನ ತಂದೆ ಮರಳಿ ಬಂದಿದ್ದನ್ನು ಕಂಡು ಕೂಡ ಅಷ್ಟೇ ಶಾಕ್ ಆಗಿದೆ ಎಂದಿದ್ದಾರೆ.
ಇದಾದ ಬಳಿಕ ಪೊಲೀಸರು ಅಂತ್ಯಕ್ರಿಯೆ ನಡೆದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.