ಮೊಬೈಲ್ ಕಳೆದುಹೋದ್ರೆ ಅಥವಾ ಕಳ್ಳತನವಾದ್ರೆ ಪೊಲೀಸರು ಕೇಸ್ ದಾಖಲು ಮಾಡಿಕೊಳ್ತಾನೇ ಇರಲಿಲ್ಲ. ಅದೆಷ್ಟೇ ದುಬಾರಿ ಫೋನ್ ಆಗಿದ್ದರು ಎಫ್‌ಐಆರ್ ಮಾಡಲು ನಿರಾಕರಿಸುತ್ತಿದ್ರು. ಆದ್ರೆ ಇನ್ಮೇಲೆ ಮುಂಬೈನ ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ಕಳೆದು ಹೋದ ಪ್ರಕರಣಗಳ ಬಗ್ಗೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅಲ್ಲಿನ ಪೊಲೀಸ್ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಅವರ ವಿರುದ್ಧ ಐಪಿಸಿ ಸೆಕ್ಷನ್ 168-ಎ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಅಂತಾನೂ ಸಂಜಯ್ ಪಾಂಡೆ ಎಚ್ಚರಿಕೆ ನೀಡಿದ್ದಾರೆ. ಈವರೆಗೆ ಮುಂಬೈ ಪೊಲೀಸರು ಮೊಬೈಲ್ ಕಳೆದು ಹೋದರೆ ಮಿಸ್ಸಿಂಗ್ ರಿಪೋರ್ಟ್ ಮಾತ್ರ ದಾಖಲಿಸುತ್ತಿದ್ದರು. ಹಾಗಿದ್ರೆ ನಾಪತ್ತೆಯಾಗಿರುವ ವರದಿಗೂ ಎಫ್‌ಐಆರ್‌ಗೂ ಏನು ವ್ಯತ್ಯಾಸ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಮಿಸ್ಸಿಂಗ್ ರಿಪೋರ್ಟ್ ದಾಖಲಿಸಿಕೊಂಡ್ರೆ ಪೊಲೀಸರು ತನಿಖೆ ನಡೆಸುವ ಅಗತ್ಯವಿಲ್ಲ. ಮೊಬೈಲ್ ಕಳೆದುಕೊಂಡ ವ್ಯಕ್ತಿ ಕಂಪನಿಯಿಂದ ಡೂಪ್ಲಿಕೇಟ್ ಸಿಮ್ ಕಾರ್ಡ್ ಪಡೆಯಲು ಈ ಮಿಸ್ಸಿಂಗ್ ರಿಪೋರ್ಟ್ ಬೇಕು. ಆದರೆ ಎಫ್‌ಐಆರ್ ದಾಖಲಾದ ನಂತರ, ಪೊಲೀಸರು ಈ ಬಗ್ಗೆ ತನಿಖೆ ಮಾಡಬೇಕಾಗುತ್ತದೆ. ಪೊಲೀಸರು ತಮ್ಮ ತನಿಖಾ ವರದಿಯನ್ನು ಸಹ ಸಲ್ಲಿಸಬೇಕಾಗುತ್ತದೆ.
ಮುಂಬೈನಲ್ಲಿ ಪ್ರತಿದಿನ 200ಕ್ಕೂ ಹೆಚ್ಚು ಫೋನ್ ಗಳು ಕಳವಾಗುತ್ತವೆ. ಮುಂಬೈನ ಲೋಕಲ್ ಟ್ರೈನ್ ನಲ್ಲಿ ಪ್ರತಿನಿತ್ಯ 50 ಲಕ್ಷಕ್ಕೂ ಹೆಚ್ಚು ಜನರು ಸಂಚರಿಸುತ್ತಾರೆ. ಹಾಗಾಗಿ ರೈಲಿನಲ್ಲಿ ಮೊಬೈಲ್ ಕಳವು ಪ್ರಕರಣಗಳೂ ಹೆಚ್ಚು. ಈ ರೀತಿ ಕದ್ದ ಫೋನ್ ಗಳ ಸ್ಕ್ರೀನ್ ಹಾಗೂ ಬ್ಯಾಟರಿ ತೆಗೆದುಕೊಂಡು ಕಳ್ಳರು ಬಿಸಾಡಿ ಬಿಡ್ತಾರೆ. ಈ ಕಳವಾದ ಫೋನ್ ಗಳನ್ನೆಲ್ಲ ಹೊರ ರಾಜ್ಯಗಳಿಗೆ ಕಳಿಸಲಾಗುತ್ತದೆ. ಇನ್ಮೇಲೆ ಈ ರೀತಿ ಕದ್ದ ಫೋನ್ ಗಳನ್ನು ಪೊಲೀಸರು ಹುಡುಕುವ ಪ್ರಯತ್ನ ಮಾಡ್ತಾರೆ. ಮೊಬೈಲ್ ಕಳ್ಳರನ್ನೂ ಸೆರೆ ಹಿಡಿಯಬಹುದು ಅನ್ನೋ ನಿರೀಕ್ಷೆ ಇದೆ.