ಬೆಂಗಳೂರು: ಭಾರೀ ಮಳೆಗೆ ಮರ ಉರುಳಿ ಬಿದ್ದು ರೈತ ಮಹಿಳೆ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೋರೇಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಪುಟ್ಟಮ್ಮ ಸ್ವಾಮಿಗೌಡ(30) ಮೃತಪಟ್ಟ ಮಹಿಳೆ ಎಂದು ಹೇಳಲಾಗಿದೆ. ದನದ ಕೊಟ್ಟಿಗೆಗೆ ಹೋಗಿದ್ದ ವೇಳೆಯಲ್ಲಿ ಮರ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಹಲವೆಡೆ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಕೊಡಗು -ಹುಣಸೂರು ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದ್ದು, ಬಿರುಗಾಳಿ ಸಹಿತ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಮರ ಬಿದ್ದ ಪರಿಣಾಮ ದ್ವಿಚಕ್ರವಾಹನದ ಘಟನೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ. ಅಲ್ಲದೇ, ಅಡಿಕೆ, ಮಾವು, ಬಾಳೆ ಬೆಳೆಗಳಿಗೆ ಹಾನಿಯಾಗಿದೆ.
5 ದಿನ ಮಳೆ:
ತಮಿಳುನಾಡಿನ ಮನ್ನಾರ್ ಕೊಲ್ಲಿ ಪ್ರದೇಶದಲ್ಲಿ ಮೇಲ್ಮೈಸುಳಿಗಾಳಿ ಉಂಟಾಗಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಏ. 2 ರಿಂದ 6 ರವರೆಗೆ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಏಪ್ರಿಲ್ 6 ರಂದು ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆಯಾಗಲಿದೆ.
ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು ಭಾಗದಲ್ಲಿ ಏಪ್ರಿಲ್ 3ರಂದು ಮಳೆಯಾಗಲಿದೆ. ಇನ್ನು ಇದಕ್ಕೆ ವ್ಯತಿರಿಕ್ತವಾಗಿ ರಾಯಚೂರಿನಲ್ಲಿ 43, ಕಲ್ಬುರ್ಗಿಯಲ್ಲಿ 41.8 ವಿಜಯಪುರದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ವಾಡಿಕೆಗಿಂತ 2 -3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದ್ದು, ಬಿಸಿಲ ಹೊಡೆತಕ್ಕೆ ಜನ ತತ್ತರಿಸಿದ್ದಾರೆ.