ನಾಸಿಕ್: ಪಾಳುಬಿದ್ದ ಬಾವಿಯಿಂದ ನಾಗರಹಾವನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರ್ಕಾರೇತರ ವನ್ಯಜೀವಿ ಸಂಶೋಧನಾ ಸಂಸ್ಥೆಯ ಸ್ವಯಂಸೇವಕರು ಮಹಾರಾಷ್ಟ್ರದ ನಾಸಿಕ್ ನಲ್ಲಿ ನಾಗರಹಾವನ್ನು ರಕ್ಷಿಸಿದ್ದಾರೆ.
ವಿಷಪೂರಿತ ಹಾವನ್ನು ರಕ್ಷಿಸುತ್ತಿರುವ ವಿಡಿಯೋವನ್ನು ಎಎನ್ಐ ಹಂಚಿಕೊಂಡಿದೆ. ಸ್ವಯಂಸೇವಕರು ಕೊಕ್ಕೆ ಮತ್ತು ಹಗ್ಗವನ್ನು ಬಳಸಿಕೊಂಡು 2 ಅಡಿ ಉದ್ದದ ಹಾವನ್ನು ನಿಧಾನವಾಗಿ ಮೇಲಕ್ಕೆ ಎಳೆದಿದ್ದಾರೆ. ಒಬ್ಬ ಸ್ವಯಂಸೇವಕ ಹಾವನ್ನು ಎತ್ತಲು ಹಗ್ಗವನ್ನು ಬಾವಿಗೆ ಇಳಿಸುತ್ತಾನೆ. ಇನ್ನೊಬ್ಬ ಸ್ವಯಂಸೇವಕ ಸರ್ಪವು ಮೇಲಕ್ಕೆ ಬರುತ್ತಿದ್ದಂತೆ ಸುರಕ್ಷಿತವಾಗಿ ದೂರದಲ್ಲಿ ಇಡಲು ಸಹಾಯ ಮಾಡಿದ್ದಾನೆ. ನಂತರ ಅದನ್ನು ಕಪ್ಪು ಚೀಲದೊಳಗೆ ಇಡಲಾಗಿದೆ.
ಈ ವಿಡಿಯೋ ತ್ವರಿತವಾಗಿ ವೈರಲ್ ಆಗಿದ್ದು, ಹಲವಾರು ಮಂದಿ ಕಾಮೆಂಟ್ ವಿಭಾಗದಲ್ಲಿ ಸ್ವಯಂ ಸೇವಕರ ಧೈರ್ಯಶಾಲಿ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಾವಿಯಲ್ಲಿ ಹಾವು ಸಿಲುಕಿರುವ ಬಗ್ಗೆ ಕರೆ ಬಂದಿತ್ತು. ನಾವು ಸ್ಥಳವನ್ನು ತಲುಪಿದಾಗ ಹಾವು ಬಾವಿಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾಗಿ ಸ್ವಯಂ ಸೇವಕರು ತಿಳಿಸಿದ್ದಾರೆ. ಹಾವು ಬಹಳ ದಣಿದಿತ್ತು ಎಂದು ಭಾಸವಾಗುತ್ತದೆ. ಬಾವಿಯಲ್ಲಿ ನೀರು ತುಂಬಿದ್ದರಿಂದ ಅದಕ್ಕೆ ವಿಶ್ರಾಂತಿ ಪಡೆಯಲು ಸ್ಥಳವಾಕಾಶ ಇರಲಿಲ್ಲ. ನಾಗರಹಾವನ್ನು ರಕ್ಷಿಸಲು ಬಾವಿಗೆ ಇಳಿಯಲು ತಮ್ಮ ತಂಡಕ್ಕೆ ಕಷ್ಟವಾಗಿದೆ. ಹೀಗಾಗಿ ಹಗ್ಗದ ಸಹಾಯದಿಂದ ಅದನ್ನು ಮೇಲಕ್ಕೆತ್ತಲಾಯಿತು ಎಂದು ಇಕೋ ಫೌಂಡೇಶನ್ನ ಸ್ವಯಂಸೇವಕ ವೈಭವ್ ಭೋಗಲೆ ತಿಳಿಸಿದ್ದಾರೆ.