ಬೆಂಗಳೂರು: ಮಾನವ ಸಂಪನ್ಮೂಲ ವ್ಯವಸ್ಥಾಪಕರನ್ನು (ಹೆಚ್ಆರ್) ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಖಾಸಗಿ ಕಂಪನಿಯ ವಜಾಗೊಂಡ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಉತ್ತರ ಹೊರವಲಯದಲ್ಲಿರುವ ಬಾಗಲೂರು ಬಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್ನಲ್ಲಿರುವ ಖಾಸಗಿ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕ ರಾಜಶೇಖರ್ ರೈ (46) ಹತ್ಯೆಗೆ ಸಂಚು ರೂಪಿಸಲಾಗಿತ್ತು. 30 ವರ್ಷದ ಮಧು.ಡಿ ತನ್ನ ನಾಲ್ವರು ಸ್ನೇಹಿತರ ಜೊತೆಗೂಡಿ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಆರ್ ಪುರಂ ನಿವಾಸಿ ಮಧು ಎಂಬಾತನನ್ನು ರಕ್ಷಣಾ ಸಚಿವಾಲಯಕ್ಕೆ ಉಪಕರಣಗಳನ್ನು ಪೂರೈಸುವ ಸಂಸ್ಥೆಯಿಂದ ವಿಡಿಯೋಗಳನ್ನು ತೆಗೆದುಕೊಂಡಿದ್ದಕ್ಕಾಗಿ ವಜಾಗೊಳಿಸಲಾಗಿತ್ತು. 12 ವರ್ಷಗಳ ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಮಧು, ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದ್ದ. ತನ್ನ ಮೊಬೈಲ್ ಫೋನ್ ಅನ್ನು ಕೆಲಸದ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ವಿವಿಧ ರಕ್ಷಣಾ ಸಾಧನಗಳ ವಿಡಿಯೋಗಳನ್ನು ಮಾಡಿದ್ದ ಎಂದು ಆರೋಪಿಸಲಾಗಿದೆ.
ವಿಡಿಯೋಗಳ ರೆಕಾರ್ಡಿಂಗ್ ಬಗ್ಗೆ ವಿವರಣೆಯನ್ನು ಕೋರಿ ಕಂಪನಿಯು ಆತನಿಗೆ ನೋಟಿಸ್ ನೀಡಿತ್ತು. ಆದರೆ, ಆತ ಸರಿಯಾಗಿ ಉತ್ತರಿಸಲಿಲ್ಲ. ಹೀಗಾಗಿ ಮಧುನನ್ನು ಕೆಲಸದಿಂದ ವಜಾಗೊಳಿಸಲಾಯ್ತು. ತನ್ನನ್ನು ಕೆಲಸದಿಂದ ತೆಗೆದಿದ್ದಕ್ಕೆ ಹೆಚ್ಆರ್ ಆಗಿರುವ ರಾಜಶೇಖರ್ ರೈ ವಿರುದ್ಧ ಸೇಡು ತೀರಿಸಲು ಮುಂದಾಗಿದ್ದಾನೆ. ಪ್ರಮೋದ್, ಅಲೆಕ್ಸಾಂಡರ್ ಡಿ, ಚಿನ್ನರಾಜು ಟಿ ಮತ್ತು ಇಮ್ರಾನ್ ಪಾಶಾ ಎಂಬ ನಾಲ್ವರು ಸ್ನೇಹಿತರೊಂದಿಗೆ ಹತ್ಯೆ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದಾನೆ.
ಮಾರ್ಚ್ 8ರ ರಾತ್ರಿ ಎಂಟು ಗಂಟೆ ವೇಳೆಗೆ ಬಾಗಲೂರು ಬಳಿ ರೈ ಕೊಲೆಗೆ ಹಂತಕರು ಸಜ್ಜಾಗಿದ್ದರು. ರಾಜಶೇಖರ್ ರೈ ಕಾರಿನ ಬಳಿ ಬರುತ್ತಿದ್ದಂತೆ ಗ್ಯಾಂಗ್ ಸಿನಿಮೀಯ ಶೈಲಿಯಲ್ಲಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದೆ. ಕೂಡಲೇ ಕಾರೊಳಗೆ ಕೂತ ಅವರು ಕಾರು ಸ್ಟಾರ್ಟ್ ಮಾಡಿದ್ದಾರೆ. ಕಾರು ಚಲಾಯಿಸದಂತೆ ಹಂತಕರು ಅಡ್ಡಗಟ್ಟಲು ಪ್ರಯತ್ನಿಸಿದ್ದು, ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ.
ಕೂಡಲೇ ಕಾರನ್ನು ಎಂಟು ಕಿ.ಮೀ ದೂರದಲ್ಲಿರುವ ಪೊಲೀಸ್ ಠಾಣೆವರೆಗೂ ಚಾಲನೆ ಮಾಡಿದ್ದಾರೆ. ಹಂತಕರು ಬೆನ್ನಟ್ಟಿದ್ರೂ ರೈ ಪೊಲೀಸ್ ಠಾಣೆಗೆ ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ರೈ ಠಾಣೆಗೆ ತೆರಳುತ್ತಿರುವುದನ್ನು ಕಂಡ ಗ್ಯಾಂಗ್ ಎಸ್ಕೇಪ್ ಆಗಿದೆ.
ಪೊಲೀಸರಿಗೆ ದೂರು ನೀಡಿದ ರೈ, ತನನ್ನು ಯಾರು, ಯಾಕೆ ಕೊಲೆ ಮಾಡಲು ಪ್ರಯತ್ನಿಸಿದ್ರು ಎಂಬ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಆದರೆ, ಎರಡು ತಿಂಗಳ ಹಿಂದೆ ಕಂಪನಿಯಲ್ಲಿ ಉದ್ಯೋಗಿ ಮಧು ಎಂಬಾತನನ್ನು ವಜಾಗೊಳಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿದ್ರು. ಬಳಿಕ ಆರೋಪಿಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.