ಮಹಿಳೆಯೊಬ್ಬರು ತನ್ನ ಸಾಕು ನಾಯಿಗೆ ಕೋವಿಡ್ ಎಂದು ಹೆಸರಿಟ್ಟಿದ್ದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಆಕೆಗೆ ಛೀಮಾರಿ ಹಾಕಿದ್ದಾರೆ.
ವಿಶ್ವಾದ್ಯಂತ ಆರು ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಂಡ ಸಾಂಕ್ರಾಮಿಕ ರೋಗದ ನಂತರ ತನ್ನ ಮುದ್ದು ನಾಯಿಗೆ ಏಕೆ ಕೋವಿಡ್ ಎಂದು ಹೆಸರಿಟ್ಟೆ ಎಂಬ ಬಗ್ಗೆ ಮಹಿಳೆ ವಿವರಿಸಿದ್ದಾರೆ.
ಲಾಕ್‌ಡೌನ್ ಪ್ರಾರಂಭದ ಸಮಯದಲ್ಲಿ ಈ ನಾಯಿಮರಿ ಸಿಕ್ಕಿದೆ. ಹೀಗಾಗಿ ಈ ಶ್ವಾನದ ಜೊತೆ ತಾನು ಹೆಚ್ಚು ಸಮಯ ಕಳೆದಿದ್ದೇನೆ. ನಾಯಿಮರಿ ಯಾರದ್ದೆಂದು ಗೊತ್ತಿರಲಿಲ್ಲ. ಹೀಗಾಗಿ ನಾಯಿ ಮಾಲೀಕರ ಬಗ್ಗೆ ಹುಡುಕಾಟ ನಡೆಸಲಾಗಿತ್ತು. ಹಲವೆಡೆ ಪೋಸ್ಟರ್ ಗಳನ್ನು ಕೂಡ ಅಂಟಿಸಲಾಗಿತ್ತು ಎಂದು ಹೇಳಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಈ ಶ್ವಾನ ದೊರೆತಿದ್ದರಿಂದ ಅದಕ್ಕೆ ಕೋವಿಡ್ ಎಂದು ಹೆಸರಿಡಲಾಗಿದೆ. ನಮ್ಮ ಎಲ್ಲಾ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತಿದ್ದೇವೆ ಎಂದು ಮಹಿಳೆ ಹೇಳಿದ್ದಾರೆ.
ದಂಪತಿ ವಾಕಿಂಗ್ ಹೋಗುವಾಗ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರಂತೆ. ಈ ವೇಳೆ ಕೋವಿಡ್ ಎಂದು ತಮ್ಮ ನಾಯಿಯನ್ನು ಕರೆದಾಗ, ಅಲ್ಲಿದ್ದ ವ್ಯಕ್ತಿಯೊಬ್ಬರು ಈ ಹೆಸರಿಟ್ಟಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ತಮ್ಮ ಸಾಕುಪ್ರಾಣಿಗಳನ್ನು ಕ್ಯಾನ್ಸರ್ ಅಥವಾ ಸಾವು ಎಂದು ಕರೆದರೆ ಹೇಗೆ ಅನಿಸುತ್ತದೆ ಅಂತಾ ಅವರು ದಂಪತಿಗೆ ಪ್ರಶ್ನಿಸಿದರಂತೆ.
ಈ ಬಗ್ಗೆ ರೆಡ್ಡಿಟ್ ನಲ್ಲಿ ಮಹಿಳೆ ಹಂಚಿಕೊಂಡಿದ್ದಾರೆ. ತಾನು ಶ್ವಾನಕ್ಕೆ ಕೋವಿಡ್ ಎಂದು ಹೆಸರಿಟ್ಟಿದ್ದು ತಪ್ಪೇ ಎಂದು ಕೇಳಿದ್ದಾರೆ. ಇದಕ್ಕೆ ನೆಟ್ಟಿಗರು ಮಹಿಳೆಗೆ ಛೀಮಾರಿ ಹಾಕಿದ್ದಾರೆ. ಏಡ್ಸ್ ಎಂದು ನಿಮ್ಮ ನಾಯಿಗೆ ಹೆಸರಿಡುವಿರಾ ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಇದೊಂದು ಮೂರ್ಖ ನಿರ್ಧಾರ ಎಂದು ಮಹಿಳೆಗೆ ಜರೆದಿದ್ದಾರೆ.