ಬೆಂಗಳೂರು: ಅಸಾನಿ ಸೈಕ್ಲೋನ್ ಎಫೆಕ್ಟ್ ನಿಂದ ಕರಾವಳಿ ಮತ್ತು ಮಲೆನಾಡಿನಲ್ಲಿ ಇನ್ನೂ ಐದು ದಿನ ಮಳೆಯಾಗುವ ಸಾಧ್ಯತೆ ಇದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಆಗ್ನೇಯ ಬಂಗಾಳಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಇದರಿಂದಾಗಿ ರಾಜ್ಯದ ಹಲವೆಡೆ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗುತ್ತಿದೆ. ಇನ್ನು ಐದು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ.
ಮಾರ್ಚ್ 21 ರಿಂದ 24ರ ವರೆಗೆ ಉಡುಪಿ, ಉತ್ತರಕನ್ನಡ, ದಕ್ಷಿಣಕನ್ನಡ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ.
ಮಾರ್ಚ್ 21 ರವರೆಗೆ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಬೆಳಗಾವಿ, ಹಾವೇರಿ, ಗದಗ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಮಾರ್ಚ್ 24, 25 ರಂದು ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಮಾರ್ಚ್ 22, 23 ರಂದು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿಯೂ ಒಣ ಹವೆ ಇರುತ್ತದೆ ಎಂದು ಹೇಳಲಾಗಿದೆ.
ಮಾರ್ಚ್ 21 ರಿಂದ 25 ರವರೆಗೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಮಾರ್ಚ್ 21 ಮತ್ತು 25 ರಂದು ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮಳೆಯಾಗಲಿದೆ ಎಂದು ಹೇಳಲಾಗಿದೆ.