ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶಿಸಿರುವ, ಅನುಪಮ್ ಖೇರ್ ಹಾಗೂ ಮಿಥುನ್ ಚಕ್ರವರ್ತಿ ಸೇರಿ ಹಲವರು ನಟಿಸಿರುವ ʼದಿ ಕಾಶ್ಮೀರ್ ಫೈಲ್ಸ್ʼ ಚಿತ್ರವು ಭಾರಿ ಯಶಸ್ಸಿನತ್ತ ಸಾಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲೂ ಭಾರಿ ಸದ್ದು ಮಾಡುತ್ತಿದೆ. ಆದರೆ, ಸಿನಿಮಾಗೆ ಕೆಲವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಹ ಸಿನಿಮಾ ಬಗ್ಗೆ ಆರೋಪ ಮಾಡಿದೆ.
ಹೀಗೆ, ಜನರಿಂದ ಮೆಚ್ಚುಗೆ ಪಡೆದಿರುವ ಒಂದು ಚಿತ್ರವು ವಿವಾದಕ್ಕೂ ಕಾರಣವಾಗಿರುವ ಬೆನ್ನಲ್ಲೇ, ’ಎಲ್ಲರೂ ಈ ಸಿನಿಮಾ ನೋಡಬೇಕು ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದು ಕ್ರಿಕೆಟಿಗ ಸುರೇಶ್ ರೈನಾ ಕರೆ ನೀಡಿದ್ದಾರೆ.
’ದಿ ಕಾಶ್ಮೀರ್ ಫೈಲ್ಸ್’ ಎಂಬ ಸಿನಿಮಾ ಈಗ ಜನರ ಸಿನಿಮಾ, ಇದು ನಿಮ್ಮ ಸಿನಿಮಾ. ನಿಜವಾಗಿಯೂ ಈ ಸಿನಿಮಾ ನಿಮ್ಮ ಮನ ಮುಟ್ಟಿದರೆ ಕಾಶ್ಮೀರದಲ್ಲಿ ನಡೆದ ಹಿಂಸಾಚಾರ ಸಂತ್ರಸ್ತರ ಪರವಾಗಿ, ಅವರು ನ್ಯಾಯ ಪಡೆಯಲು ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ಹಿಂಸಾಚಾರ, ಅವರನ್ನು ರಾಜ್ಯ (ಈಗ ಕೇಂದ್ರಾಡಳಿತ ಪ್ರದೇಶ) ದಿಂದ ಹೊರಹಾಕಿರುವ ಕುರಿತು ʼದಿ ಕಾಶ್ಮೀರ್ ಫೈಲ್ಸ್ʼನಲ್ಲಿ ಚಿತ್ರಿಸಲಾಗಿದೆ. ಸಿನಿಮಾವನ್ನು ನೋಡಿ ಭಾವುಕರಾದ ಮಹಿಳೆಯೊಬ್ಬರು ವಿವೇಕ್ ರಂಜನ್ ಅವರ ಕಾಲಿಗೆ ನಮಸ್ಕಾರ ಮಾಡಲು ಹೋಗಿದ್ದರು. ಅಲ್ಲದೆ, ’ನೀವು ಮಾತ್ರ ನಮ್ಮ ಕಷ್ಟವನ್ನು ಅರಿತುಕೊಂಡಿರಿ. ನಮ್ಮ ಹೃದಯದ ನೋವಿಗೆ ನೀವು ಮಾತ್ರ ಸ್ಪಂದಿಸಿದ್ದೀರಿ. ನಮಗೆ ನೀವು ದೇವರ ಸಮಾನ. ನಾವು ನಿಮ್ಮ ಕಾಲು ಮುಟ್ಟಿ ನಮಸ್ಕಾರ ಮಾಡಬೇಕು,’ ಎಂದು ಮಹಿಳೆ ಹೇಳಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊವನ್ನು ಸಹ ಸುರೇಶ್ ರೈನಾ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.