ಕೋವಿಡ್-19 ಉಸಿರಾಟ ಸಮಸ್ಯೆ ತಂದೊಡ್ಡುವ ಕಾಯಿಲೆ. ಕೊರೊನಾ ವೈರಸ್ ದೇಹ ಪ್ರವೇಶಿಸಿದ ಮೇಲೆ ನಿಮ್ಮ ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ನಿಮ್ಮ ಕಲ್ಪನೆಯನ್ನೂ ಮೀರಿ ಹಾನಿ ಮಾಡುತ್ತದೆ. 2019ರಲ್ಲಿ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಈ ಭಯಾನಕ ವೈರಸ್ ಹಲವಾರು ಬಾರಿ ವಿಕಸನಗೊಂಡಿದೆ ಮತ್ತು ರೂಪಾಂತರಗೊಂಡಿದೆ.
ಶ್ವಾಸಕೋಶ, ಮೆದುಳು ಹೀಗೆ ವೈರಸ್ ದೇಹದ ಎಲ್ಲಾ ಭಾಗಗಳಿಗೆ ಹಾನಿ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಕೋವಿಡ್ ನಿಂದ ಚೇತರಿಸಿಕೊಂಡ ನಂತರ ವೈರಸ್ ನಿಮ್ಮ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಅನ್ನೋದನ್ನು ಯೋಚಿಸಿದ್ದೀರಾ ? ಕೋವಿಡ್ ನಂತರ ತೀವ್ರ ತರವಾದ ಹೃದಯದ ತೊಂದರೆಗಳು ಕಾಣಿಸಿಕೊಳ್ಳಬಹುದು. ಅದನ್ನು ಯಾವ ರೀತಿಯಲ್ಲಿ ನಿರ್ವಹಿಸಬಹುದು ಅನ್ನೋದನ್ನು ನೋಡೋಣ.
ದೇಹದ ಅನೇಕ ಅಂಗಗಳ ಮೇಲೆ ಪರಿಣಾಮ ಬೀರುವ ಕೋವಿಡ್, ಸೋಂಕಿನ ನಂತರವೂ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ‘ಹೃದಯಕ್ಕೆ ಅಪ್ಪಳಿಸುವ ಪರಿಪೂರ್ಣ ಚಂಡಮಾರುತ’ ಎಂದು ವಿಶ್ವ ಹೃದಯ ಒಕ್ಕೂಟ ಕರೆದಿದೆ. ಹೃದಯವನ್ನು ಸುರಕ್ಷಿತವಾಗಿರಿಸಲು ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ನೀಡಿದೆ.
COVID-19 ಸೋಂಕು ಸಾಮಾನ್ಯವಾಗಿ ಹೃದಯದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಹೃದಯ ಸ್ನಾಯುಗಳ ಉರಿಯೂತ ಅಥವಾ ಹೃದಯವನ್ನು ಒಳಗೊಂಡಿರುವ ಚೀಲದ ಉರಿಯೂತ ಕಾಣಿಸಿಕೊಳ್ಳುವ ಅಪಾಯವಿರುತ್ತದೆ.
ಹೃದಯ ಬಡಿತ ಹೆಚ್ಚಳ : ತಜ್ಞರ ಪ್ರಕಾರ ಚೇತರಿಸಿಕೊಂಡಿರುವ ಕೋವಿಡ್ ರೋಗಿಗಳಲ್ಲಿ ಹೃದಯ ಬಡಿತ ಹೆಚ್ಚಾಗಿರುವುದು ಕಂಡು ಬಂದಿದೆ. ಇದು 60 ರಿಂದ 100ರ ನಡುವೆ ಬದಲಾಗುತ್ತದೆ. ಹೃದಯ ಬಡಿತದಲ್ಲಿನ ಏರಿಕೆ ಟಾಕಿಕಾರ್ಡಿಯಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಎಚ್ಚರಿಕೆ ವಹಿಸದೇ ಇದ್ದಲ್ಲಿ ಇದೇ ನಿಮಗೆ ಮಾರಕವಾಗಬಹುದು.
ಉಸಿರಾಟದಲ್ಲಿ ತೊಂದರೆ : ಕೊರೊನಾದಿಂದ ಗುಣಮುಖರಾದ ಬಳಿಕವೂ ಕೆಲವರು ತೀವ್ರವಾದ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಉಸಿರಾಟದ ತೊಂದರೆಗೆ ದೀರ್ಘಕಾಲದ ಎದೆ ನೋವು ಕಾರಣವಾಗಿರಬಹುದು. ಕೆಲವರಲ್ಲಿ ಇದು ಬೇಗನೆ ಗುಣವಾಗುವ ಸಾಧ್ಯತೆ ಇರುತ್ತದೆ.
ಹೃದಯದ ಕಾಳಜಿ ಹೇಗಿರಬೇಕು ?
ಕೊರೊನಾ ನಂತರ ಆ ವ್ಯಕ್ತಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ತುತ್ತಾಗುವ ಅಪಾಯವಿರುತ್ತದೆ. ಯಾಕಂದ್ರೆ ಕೋವಿಡ್ ಸೋಂಕು ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಹಾಗಾಗಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಿ ರಕ್ತ ಹೆಪ್ಪುಗಟ್ಟದಂತೆ ಔಷಧ ಪಡೆದುಕೊಳ್ಳಿ.
ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಿ. ಕೊರೊನಾದಿಂದ ಚೇತರಿಸಿಕೊಳ್ಳಲು ಉತ್ತಮ ಆಹಾರ ಸೇವನೆ ಬಹು ಮುಖ್ಯ. ಆರೋಗ್ಯಕರ ಹೃದಯಕ್ಕಾಗಿ ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕಾಳುಗಳನ್ನು ಹೆಚ್ಚಾಗಿ ಸೇವಿಸಿ.
ಮೊದಲೇ ಪ್ಯಾಕ್ ಮಾಡಿದ ಆಹಾರಗಳು, ಉಪ್ಪು ಹಾಕಿದ ಪದಾರ್ಥಗಳು, ಕೋಲ್ಡ್ ಕಟ್ಸ್ ಇತ್ಯಾದಿಗಳಿಂದ ದೂರವಿರಿ. ಇದಲ್ಲದೆ ದೈಹಿಕವಾಗಿ ಸಕ್ರಿಯರಾಗಿರಿ. ವ್ಯಾಯಾಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಲಘು ವ್ಯಾಯಾಮ ಅತಿ ಮುಖ್ಯ. ದೈಹಿಕ ಚಟುವಟಿಕೆಯು ನಿಮ್ಮ ತ್ರಾಣವನ್ನು ಹೆಚ್ಚಿಸುತ್ತದೆ.