ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ರಮವಾಗಿ ಮೀನುಗಳಿಗೆ ಗಾಳ ಹಾಕಿದ್ದ ಪ್ರಕರಣದಲ್ಲಿ ಆಸ್ಸಾಂನ ಇಬ್ಬರು ಮಾಜಿ ಶಾಸಕರಿಗೆ ಶಿಕ್ಷೆಯಾಗಿದೆ. ಗೋಲಾಘಾಟ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯ ಇವರಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಜೊತೆಗೆ 5000 ರೂಪಾಯಿ ದಂಡ ಹಾಕಿದೆ. ದಂಡ ಪಾವತಿಸಲು ವಿಫಲರಾದ್ರೆ ಇನ್ನೆರಡು ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕೆಂದು ಸೂಚಿಸಿದೆ. ಮಾಜಿ ಶಾಸಕರಾದ ಜಿತೇನ್ ಗೊಗೊಯ್ ಹಾಗೂ ಕುಶಾಲ್ ದೊವಾರಿ ಸೇರಿದಂತೆ ಐವರ ವಿರುದ್ಧ 2009ರಲ್ಲಿ ದಾಖಲಾದ ಪ್ರಕರಣ ಇದು.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಕೌಶಿಕ್ ಹಜಾರಿಕಾ ಈ ಪ್ರಕರಣದ ತೀರ್ಪು ಪ್ರಕಟಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಗೊಗೊಯ್, ಬೋಕಾಖಟ್ ಕ್ಷೇತ್ರದ ಶಾಸಕರಾಗಿದ್ದರು. ಕುಶಾಲ್ ದೊವಾರಿ, ಥೋವ್ರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ರು. ಇಬ್ಬರೂ ತಮ್ಮ ಸ್ನೇಹಿತರ ಜೊತೆಗೂಡಿಕೊಂಡು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನವನ್ನು ಪ್ರವೇಶಿಸಿದ್ದಾರೆ.
ಅಲ್ಲಿ ಅಕ್ರಮವಾಗಿ ಗಾಳ ಹಾಕಿದ್ದಾರೆ. ಉದ್ಯಾನವನದ ಫಾರೆಸ್ಟ್ ರೇಂಜರ್ ಆಗಿದ್ದ ದಂಬರುಧರ್ ಬೋರೋ ಎಂಬಾತ ಇವರನ್ನು ತಡೆಯಲು ಪ್ರಯತ್ನಿಸಿದ್ದಾನೆ. ಆಗ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಬೋರೋ ಈ ಐವರ ವಿರುದ್ಧ ಕೇಸ್ ದಾಖಲಿಸಿದ್ದ. ಆರೋಪಿಗಳು ಸದ್ಯ ಜಾಮೀನು ಪಡೆದಿರುವುದರಿಂದ ತಕ್ಷಣಕ್ಕೆ ಜೈಲು ಪಾಲಾಗಿಲ್ಲ.