ಪತಿಯನ್ನು ಕೊಲೆ ಮಾಡಿ ಆತನ ಮೃತದೇಹಗಳನ್ನು ಐದು ಭಾಗಗಳಾಗಿ ಕತ್ತರಿಸಿ ಮಧ್ಯ ಪ್ರದೇಶದ ಇಂದೋರ್ ಜಿಲ್ಲೆಯ ಎರಡು ಕಡೆಗಳಲ್ಲಿ ಭಾಗಗಳನ್ನು ಇರಿಸಿದ್ದ 40 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ ಬೆಚ್ಚಿ ಬೀಳಿಸುವ ಘಟನೆಯೊಂದು ವರದಿಯಾಗಿದೆ.
ಅಂದಹಾಗೆ ಈ ಘಟನೆಯು ಫೆಬ್ರವರಿ ಐದನೇ ತಾರೀಖಿನಂದು ನೆಡೆದಿದೆ. ಬಂಧಿತ ಮಹಿಳೆಯನ್ನು ಸುನೀತಾ ಎಂದು ಗುರುತಿಸಲಾಗಿದೆ. ಈಕೆ ತನ್ನ ಇಬ್ಬರು ಸ್ನೇಹಿತರಾದ ರಿಜ್ವಾನ್ ಖಾನ್ ಹಾಗೂ ಬಯ್ಯು ಸಹಾಯದಿಂದ ಪತಿ ಬಾಬುನನ್ನು ಕೊಲೆ ಮಾಡಿದ್ದಾರೆ. ಮೃತ ಪತಿ ವೃತ್ತಿಯಲ್ಲಿ ಚಾಲಕನಾಗಿದ್ದ ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ಬಾಬು ಹಾಗೂ ಸುನೀತಾ ದಂಪತಿಯ ಪುತ್ರ ಈ ವಿಚಾರವನ್ನು ಬಾಯ್ಬಿಟ್ಟ ವೇಳೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಪತಿಯ ಆಹಾರದಲ್ಲಿ ಪತ್ನಿ ಸುನೀತಾ ವಿಷವನ್ನು ಹಾಕಿದ್ದಳು. ಈ ಆಹಾರವನ್ನು ಸೇವಿಸಿದ್ದ ಬಾಬು ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಈಕೆ ತನ್ನ ಸ್ನೇಹಿತರ ಜೊತೆ ಸೇರಿ ಆತನ ಕತ್ತು ಹಿಸುಕಿದ್ದಾರೆ. ಈ ಇಬ್ಬರು ಸ್ನೇಹಿತರು ಮಾಂಸದ ಅಂಗಡಿಯನ್ನು ಇಟ್ಟುಕೊಂಡಿದ್ದರು. ಇವರು ಬಾಬುವಿನ ಮೃತದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದಾರೆ. ಬಳಿಕ ಮೃತದೇಹವನ್ನು ಬೇರೆ ಬೇರೆ ಜಾಗಗಳಲ್ಲಿ ಎಸೆದಿದ್ದರು ಎನ್ನಲಾಗಿದೆ.
ಬಾಬುವಿನ ಕಾಲು ಹಾಗೂ ಕೈಗಳನ್ನು ದೇವಾಸ್ ಕಾಡಿನಲ್ಲಿ ಎಸೆಯಲಾಗಿದೆ. ಈ ವೇಳೆ ಸುನೀತಾ ಮನೆಯ ಟ್ಯಾಂಕ್ನಲ್ಲಿ ಮುಂಡ ಹಾಗೂ ತಲೆಯನ್ನು ಹೂತಿಡಲಾಗಿದೆ.
ಗುರುವಾರದಂದು ರಾತ್ರಿ ಮದ್ಯದ ಅಮಲಿನಲ್ಲಿ ಪುತ್ರ ಪ್ರಶಾಂತ್ ಜೇಡನ್ ತನ್ನ ಸ್ನೇಹಿತರ ಬಳಿಯಲ್ಲಿ ಈ ಪ್ರಕರಣದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಳಿಕ ಸ್ನೇಹಿತರು ಪೊಲೀಸರಿಗೆ ಈ ಮಾಹಿತಿಯನ್ನು ನೀಡಿದ್ದು ಪೊಲೀಸರು ಸುನೀತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.