ಫೋನ್ ವಿಚಾರವಾಗಿ ಜಗಳ ಮಾಡಿಕೊಂಡ ಬಳಿಕ ಇಬ್ಬರು ಸ್ನೇಹಿತರು ಸೇರಿ 20 ವರ್ಷದ ಯುವಕನನ್ನು ಚಲಿಸುವ ರೈಲಿನ ಕೆಳಗೆ ಎಸೆದ ಘಟನೆಯು ದೆಹಲಿಯ ಪಂಜಾಬಿಬಾಗ್ನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ದಿಲೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಾಳು ದಿಲೀಪ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ದಿಲೀಪ್ ತನ್ನ ಸ್ನೇಹಿತರಾದ ಹೀರಾ ಹಾಗೂ ಅಪ್ರಾಪ್ತನ ವಿರುದ್ಧ ತನ್ನ ಫೋನ್ ಕಳುವು ಮಾಡಿರುವ ಆರೋಪ ಹೊರಿಸಿದ್ದ ಎನ್ನಲಾಗಿದೆ. ಮದ್ಯ ವ್ಯಸನಿಗಳು ಹಾಗೂ ಕಳ್ಳರೂ ಆಗಿದ್ದ ಇವರಿಬ್ಬರಿಗೂ ದಿಲೀಪ್ನ ಈ ಆರೋಪವು ಕೋಪ ತರಿಸಿತ್ತು, ಹೀಗಾಗಿ ದಿಲೀಪ್ನನ್ನು ಬಲವಂತವಾಗಿ ಎಳೆದುಕೊಂಡು ಹೋದ ಹೀರಾ ಹಾಗೂ ಅಪ್ರಾಪ್ತ ಬಾಲಕ ಆತನನ್ನು ಚಲಿಸುತ್ತಿದ್ದ ರೈಲಿನಡಿಗೆ ತಳ್ಳಿದ್ದಾರೆ.
ಪೊಲೀಸರ ವರದಿ ಪ್ರಕಾರ, ಇಬ್ಬರೂ ಚಲಿಸುತ್ತಿದ್ದ ರೈಲಿನ ಮುಂದೆ ದಿಲೀಪ್ನನ್ನು ಎಸೆದು ಪರಾರಿಯಾಗಿದ್ದಾರೆ. ಪೊಲೀಸರು ಹೀರಾ ಮತ್ತು ಅಪ್ರಾಪ್ತನ ವಿರುದ್ಧ ಎಫ್ಐಆರ್ನಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್ಗಳನ್ನು ಹಾಕಿದ್ದಾರೆ ಮತ್ತು ಪ್ರಸ್ತುತ ಇಬ್ಬರಿಗಾಗಿ ಹುಡುಕುತ್ತಿದ್ದಾರೆ.