ಬೆಂಗಳೂರು: ಅಧಿವೇಶನದಲ್ಲಿ ಚರ್ಚೆ ಮಾಡಲು ಅನೇಕ ವಿಷಯಗಳಿವೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ದಾಖಲೆ ಸಮೇತ ಮಾತನಾಡಲು ಸಿದ್ಧತೆ ಮಾಡಿಕೊಂಡಿದ್ದೇನೆ. ಸಿದ್ದರಾಮಯ್ಯ ಅವಧಿಯಲ್ಲಿ ನಡೆದ ಲೂಟಿಯ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಗೋವಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆ ನೋಡಿದ್ದೇನೆ. ರಾಹುಲ್ ಗಾಂಧಿಯವರೇ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ‘ನಮ್ಮ ನೀರು ನಮ್ಮ ಹಕ್ಕು’ ಎನ್ನುತ್ತಾರೆ. ಮತ್ತೊಂದೆಡೆ ಗೋವಾದಲ್ಲಿ ಮಹದಾಯಿ ಬಗ್ಗೆ ಮಾತನಾಡುತ್ತಾರೆ. ದ್ವಂದ್ವ ನೀತಿಯ ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆಗಾಗಿ ಇಲ್ಲಿ ಪಾದಯಾತ್ರೆ ಮಾಡುತ್ತಾರೆ. ಅಲ್ಲಿ ನೀರು ಕೊಡುವುದಿಲ್ಲ ಎಂದು ಪ್ರಣಾಳಿಕೆ ಬಿಡುಗಡೆ ಮಾಡುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಇಬ್ಬಗೆಯ ನೀತಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.