ಐಪಿಎಲ್ 2022 ರ ಮೆಗಾ ಹರಾಜು ಸಾಕಷ್ಟು ಸುದ್ದಿಯಲ್ಲಿದೆ. ಈ ಬಾರಿ ಅನೇಕ ಅಪರಿಚಿತ ಆಟಗಾರರನ್ನು ಫ್ರಾಂಚೈಸಿಗಳು ಕೋಟ್ಯಾಂತರ ರೂಪಾಯಿ ಕೊಟ್ಟು ಖರೀದಿಸಿದ್ದೇ ಇದಕ್ಕೆ ಕಾರಣ. ಇದ್ರಲ್ಲಿ ಉತ್ತರ ಪ್ರದೇಶದ ಎಡಗೈ ವೇಗದ ಬೌಲರ್ ಯಶ್ ದಯಾಳ್ ಕೂಡ ಒಬ್ಬರು. ಯಶ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಆದ್ರೆ ಐಪಿಎಲ್ ಫ್ರಾಂಚೈಸಿಗಳು ಯಶ್ ಆಟ ನೋಡಿದ್ದಾರೆ. ಇದೇ ಕಾರಣಕ್ಕೆ ಗುಜರಾತ್ ಟೈಟಾನ್ 3.20 ಕೋಟಿ ರೂ. ನೀಡಿ ಖರೀದಿ ಮಾಡಿದೆ.
ಯಶ್ ಮೂಲ ಬೆಲೆ 20 ಲಕ್ಷವಾಗಿತ್ತು. ಸದ್ಯ ರಣಜಿ ಟ್ರೋಫಿಗಾಗಿ ಗುರ್ಗಾಂವ್ ನಲ್ಲಿರುವ ಯಶ್, ಕ್ವಾರಂಟೈನ್ ನಲ್ಲಿದ್ದಾರೆ. ಹೊಟೇಲ್ ನಲ್ಲಿ ಐಪಿಎಲ್ ಹರಾಜು ನೋಡ್ತಿದ್ದ ಯಶ್, ತಮ್ಮ ಹೆಸರು ಬರಲಿಲ್ಲ ಎಂಬ ಕಾರಣಕ್ಕೆ ಟಿವಿ ಬಂದ್ ಮಾಡಿ, ಮೊಬೈಲ್ ಸೈಲೆಂಟ್ ಮಾಡಿ ಮಲಗಿದ್ದರಂತೆ. ಒಂದು ಗಂಟೆ ಬಿಟ್ಟು ನಿದ್ರೆಯಿಂದ ಎದ್ದಾಗ ಫೋನ್ ನಲ್ಲಿ ಸಾಕಷ್ಟು ಮಿಸ್ಡ್ ಕಾಲ್ ಇತ್ತಂತೆ. ಅವರ ತಂದೆ ಚಂದ್ರಪಾಲ್ ದಯಾಳ್ 20 ಸಾರಿ ಕರೆ ಮಾಡಿದ್ದರಂತೆ. ತಕ್ಷಣ ತಂದೆಗೆ ಯಶ್ ಕರೆ ಮಾಡಿದ್ದಾರೆ. ಆಗ ತನ್ನನ್ನು 16 ಪಟ್ಟು ಹೆಚ್ಚು ಬೆಲೆಗೆ ಗುಜರಾತ್ ಖರೀದಿ ಮಾಡಿದೆ ಎಂಬುದು ಗೊತ್ತಾಗಿದೆ.
ಮಗ ಕರೆ ತೆಗೆದುಕೊಳ್ಳದೆ ಇರುವುದು ನನ್ನ ಆತಂಕಕ್ಕೆ ಕಾರಣವಾಗಿತ್ತು ಎನ್ನುತ್ತಾರೆ ತಂದೆ. ಯಶ್ ಗೆ ಸ್ನೇಹಿತರು ಹಾಗೂ ಸಂಬಂಧಿಕರಿಂದ ಶುಭಾಷಯದ ಸುರಿಮಳೆಯಾಗ್ತಿದೆ. ಯಶ್ ತಂದೆ ಕೂಡ ಮಾಜಿ ಕ್ರಿಕೆಟ್ ಆಟಗಾರರಾಗಿದ್ದು, 12ನೇ ವಯಸ್ಸಿನಲ್ಲಿಯೇ ಮಗನಿಗೆ ಕ್ರಿಕೆಟ್ ತರಬೇತಿ ಶುರು ಮಾಡಿದ್ದರಂತೆ.