ನಿಮ್ಮ ನೆಚ್ಚಿನ ಮಾವಿನ ಹಣ್ಣನ್ನು ಪಡೆಯಬೇಕು ಅಂದರೆ ನೀವು ಎಷ್ಟು ಹಣವನ್ನು ಖರ್ಚು ಮಾಡೋಕೆ ತಯಾರಿದ್ದೀರಿ..? ಒಂದು ಬುಟ್ಟಿ ಮಾವಿನ ಹಣ್ಣಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣ ನೀಡುತ್ತೀರಿ..? ಈ ಪ್ರಶ್ನೆಯನ್ನು ಈ ಸಮಯದಲ್ಲಿ ಕೇಳೋಕೆ ಕಾರಣವೇನು..? ಎಂದು ಯೋಚನೆ ಮಾಡುತ್ತಿರಬಹುದು.
ಪುಣೆಯ ಮಾರುಕಟ್ಟೆಯೊಂದರಲ್ಲಿ ನಡೆದ ಮಾವಿನ ಹಣ್ಣಿನ ಹರಾಜಿನಲ್ಲಿ ಒಂದು ಬುಟ್ಟಿ ಮಾವಿನ ಹಣ್ಣನ್ನು ಬರೋಬ್ಬರಿ 31 ಸಾವಿರ ರೂಪಾಯಿಗೆ ಖರೀದಿ ಮಾಡಲಾಗಿದೆ. ಇದು ಕಳೆದ 50 ವರ್ಷಗಳಲ್ಲಿ ನಡೆದ ಅತ್ಯಂತ ದುಬಾರಿ ಮಾವಿನಹಣ್ಣಿನ ಖರೀದಿಯಾಗಿದೆ ಎಂದು ತಿಳಿದುಬಂದಿದೆ.
ಪ್ರಸಿದ್ಧ ಹಪಸ್ ಮಾವಿನ ಮೊದಲ ಬಾಕ್ಸ್ ನಿನ್ನೆ ದೇವಗಡದ ರತ್ನಗಿರಿಯಿಂದ ಪುಣೆಯ ಎಪಿಎಂಸಿ ಮಾರುಕಟ್ಟೆಗೆ ಆಗಮಿಸಿತ್ತು. ಈ ಮಾವಿನ ಹಣ್ಣನ್ನು ಖರೀದಿ ಮಾಡಲು 5 ಸಾವಿರ ರೂಪಾಯಿಗಳಿಂದ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ಒಂದು ಕ್ರೇಟ್ ಮಾವಿನ ಹಣ್ಣು 31 ಸಾವಿರ ರೂಪಾಯಿಗಳಿಗೆ ಮಾರಾಟವಾಗಿದೆ.
ಇದು ಪುಣೆ ಮಾರುಕಟ್ಟೆಯಲ್ಲಿ ಹರಾಜಾದ ಐದನೇ ಕ್ರೇಟ್ ಆಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಪುಣೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿಗೆ ಸಿಕ್ಕ ಅತ್ಯಧಿಕ ಬೆಲೆ ಇದಾಗಿದೆ ಎಂದು ವ್ಯಾಪಾರಿಯೊಬ್ಬರು ಮಾಹಿತಿ ನೀಡಿದ್ದಾರೆ.