ಅಹ್ಮದಾಬಾದ್ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಟೀಮ್ ಇಂಡಿಯಾದ ಹೊಸ ನಾಯಕನ ಹೊಸ ಯೋಜನೆಗೆ ತಬ್ಬಿಬ್ಬಾದ ಪ್ರವಾಸಿಗರು ಬ್ಯಾಟಿಂಗ್- ಬೌಲಂಗ್ ಎರಡರಲ್ಲೂ ನೀರಸ ಪ್ರದರ್ಶನ ತೋರಿದರು. 6 ವಿಕೆಟ್ಗಳ ಭರ್ಜರಿ ಜಯ ಕಾಣುವ ಮೂಲಕ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾ ಪರಿಪೂರ್ಣ ನಾಯಕನಾಗಿ ಮೊದಲ ಏಕದಿನ ಪಂದ್ಯವನ್ನು ಮುನ್ನಡೆಸಿದರೆ, ವಿರಾಟ್ ಕೊಹ್ಲಿ ರೋಹಿತ್ ನಾಯಕತ್ವದಡಿಯಲ್ಲಿ ಮೊದಲ ಪಂದ್ಯವನ್ನು ಆಡಿದರು. ಇದಕ್ಕಾಗಿಯೇ ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿತ್ತು. ಯಾಕೆಂದರೆ ಕೊಹ್ಲಿ – ರೋಹಿತ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಆದರೆ, ನಿನ್ನೆಯ ಪಂದ್ಯದಲ್ಲಿ ಇವರಿಬ್ಬರ ನಡುವೆ ನಡೆದ ಆ ಒಂದು ಘಟನೆ ಈ ರೀತಿ ಅಂದುಕೊಳ್ಳುತ್ತಿದ್ದವರಿಗೆ ಶಾಕ್ ನೀಡಿತು.
ODI Ranking : ಕುಸಿದ ಟೀಂ ಇಂಡಿಯಾ
ಈ ಘಟನೆಗೆ ಕಾರಣವಾಗಿದ್ದು 20ನೇ ಓವರ್ನಲ್ಲಿ ಯುಜ್ವೇಂದ್ರ ಚಹಲ್ ಕಿತ್ತ ವಿಕೆಟ್. ತಮ್ಮ ಮೊದಲ ಓವರ್ನ ಮೂರನೇ ಎಸೆತದಲ್ಲೇ ಚಹಲ್ ನಿಕೋಲಸ್ ಪೂರನ್ ರನ್ನು ಎಲ್ಬಿಡಬ್ಲ್ಯೂ ಮಾಡಿ ಪೆವಿಲಿಯನ್ಗೆ ಅಟ್ಟಿದರು. ಇದರ ಮುಂದಿನ ಎಸೆತದಲ್ಲೇ ವಿಂಡೀಸ್ ನಾಯಕ ಪ್ರಮುಖ ವಿಕೆಟ್ ಕೀರೊನ್ ಪೊಲಾರ್ಡ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಎರಡು ಎಸೆತದಲ್ಲಿ 2 ವಿಕೆಟ್ ಪಡೆದುಕೊಂಡ ಭಾರತ ಖುಷಿಯಲ್ಲಿ ತೇಲಾಡಿತು. ಅದರಲ್ಲೂ ಕೊಹ್ಲಿ ಹಾಗೂ ರೋಹಿತ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಜಿಗಿದುಕೊಂಡು ಕೈ-ಕೈ ತಾಗಿಸಿ ನಗುತ್ತಾ ಖುಷಿಯಲ್ಲಿ ಸಂಭ್ರಮಿಸಿದರು.
ರೋಹಿತ್- ಕೊಹ್ಲಿ ಅವರ ಈ ಸಂಭ್ರಮವನ್ನು ಕಂಡು ಅನೇಕರು ಇದು ಈ ಪಂದ್ಯದ ಸ್ಮರಣೀಯ ಕ್ಷಣ ಎಂದು ಬಣ್ಣಿಸಿದ್ದಾರೆ. ಇನ್ನೂ ಕೆಲವರು ಕೊಹ್ಲಿ-ರೋಹಿತ್ ನಡುವೆ ಸರಿಯಿಲ್ಲ ಎಂಬವರು ಒಮ್ಮೆ ಈ ವಿಡಿಯೋ ನೋಡಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.