ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗಲು ಎಂತಾ ಕೃತ್ಯ ಎಸಗಲು ಸಿದ್ಧರಾಗಿತ್ತಾರೆ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅದ್ರಲ್ಲೂ ಕೆಲವು ಟಿಕ್ಟಾಕ್ ಸ್ಟಾರ್ಗಳು ತಮ್ಮ ವಿಡಿಯೋಗೆ ಅತೀ ಹೆಚ್ಚು ಲೈಕ್ ಪಡೆಯಲು ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ. ಈಗ ನಾವು ಹೇಳಲು ಹೊರಟಿರುವುದು ಕೂಡ ಅಂತಹ ಟಿಕ್ಟಾಕ್ ಹುಚ್ಚಾಟದ ಕತೆ. ಕೇವಲ ಲೈಕ್ಸ್ಗಾಗಿ ಮುಗ್ಧ ಕಾಡುವಾಸಿಗೆ ಕಿರುಕುಳ ನೀಡಿದ ಕತೆ.
ಈ ವಿಡಿಯೋ ಶ್ರೀಲಂಕಾದ್ದಾಗಿದ್ದು, ವಿಡಿಯೋ ನೋಡಿದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. @shashikagimhandha ಎಂಬ ಹೆಸರಿನ ಟಿಕ್ಟಾಕರ್ ಒಬ್ಬ ರಸ್ತೆಯಲ್ಲಿ ಬರುತ್ತಿದ್ದ ಆನೆಯ ಮೇಲೆ ದೌರ್ಜನ್ಯ ಮಾಡುತ್ತಿರುವ ವಿಡಿಯೋ ಇದಾಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಪೂರ್ಣಾ ಸೆನೆವಿರತ್ನ (Poorna Seneviratne) ಎಂಬ ಬಳಕೆದಾರರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರ. ಈ ವಿಡಿಯೋವನ್ನು ಮೂಲತಃ ಟಿಕ್ಟಾಕ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಕಿರು ವಿಡಿಯೊದಲ್ಲಿ ಟಿಕ್ಟಾಕ್ ಬಳಕೆದಾರ ತಮ್ಮ ಕಾರಿನ ಮೂಲಕ ಕಾಡಾನೆಯನ್ನು ಬೆದರಿಸುತ್ತಿರುವ ದೃಶ್ಯ ಕಾಣಬಹುದು. ರಾತ್ರಿ ವೇಳೆ ಚಿತ್ರೀಕರಣಗೊಂಡ ದೃಶ್ಯ ಇದಾಗಿದೆ.
ಆಟೋರಿಕ್ಷಾ ಹತ್ತಿ ಹೊರಟ ‘ಬಿಗ್ ಬಾಸ್’ ಸ್ಪರ್ಧಿ..!
ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ಈತ ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ಆನೆಯೊಂದು ಎದುರಾಗುತ್ತದೆ. ರಸ್ತೆಯ ಬದಿ ನಿಂತಿರುವ ಆನೆಯ ಮುಂದೆ ಮುಂದೆ ಕಾರನ್ನು ಈತ ತೆಗೆದುಕೊಂಡು ಹೋಗುತ್ತಿದ್ದು, ಇದನ್ನು ನೋಡಿ ಭಯಗೊಂಡ ಆನೆ ಹಿಮ್ಮುಖವಾಗಿ ಹಿಂದೆ ಹಿಂದೆ ಚಲಿಸುತ್ತಿದೆ. ಆದರೂ ಸುಮ್ಮನಿರದ ಆತ, ಆನೆ ಹಿಮ್ಮುಖವಾಗಿ ಚಲಿಸಿ ಇನ್ನೊಂದು ಕಡೆ ರಸ್ತೆಯಿಂದ ಕೆಳಗೆ ಕಾಡಿನೊಳಗೆ ಇಳಿಯುವವರೆಗೂ ಆತ ತನ್ನ ವಾಹನವನ್ನು ಅದರ ಮುಂದೆ ಮುಂದೆಯೇ ತೆಗೆದುಕೊಂಡು ಹೋಗುತ್ತಾನೆ. ಈ ವೇಳೆ ಆನೆ ಗಾಬರಿಯಾಗುವುದರ ಜೊತೆ ಘೀಳಿಟ್ಟು ಹಿಂದೆ ಹಿಂದೆ ಸಾಗುತ್ತದೆ. ಈ ದೃಶ್ಯವನ್ನು ಆತ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನಷ್ಟಕ್ಕೆ ತಾನಿದ್ದ ಮುಗ್ಧ ಆನೆಯನ್ನು ಕೆಣಕಿ ಕಿರುಕುಳ ನೀಡಿದ್ದಕ್ಕೆ ಸಿಟ್ಟಿಗೆದ್ದಿದ್ದಾರೆ.
ಕೇವಲ ಲೈಕ್ಸ್ಗಾಗಿ ವನ್ಯಜೀವಿಗಳಿಗೆ ಕಿರುಕುಳ ನೀಡಿದ್ದು ಸರಿಯಲ್ಲ. ಇದೊಂದು ದುಃಖದ ವಿಷಯ ಇಂತಹ ಭೀಕರ ಕೃತ್ಯವನ್ನು ಮಾಡುವ ಜನರೂ ಇದ್ದಾರೆಯೇ ಎಂದು ನೋಡುಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಶ್ರೀಲಂಕಾದ ಸ್ಟಾರ್ ಕ್ರಿಕೆಟರ್ ಮಹೇಲಾ ಜಯವರ್ದನೆ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಘಟನೆ ಇದೆ ಮೊದಲಲ್ಲ, ಪ್ರಾಣಿಗಳನ್ನ ತಮ್ಮ ಪಾಡಿಗೆ ತಾವು ಇರಲು ಬಿಟ್ಟುಬಿಡಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಸಹ ಈ ಘಟನೆಯ ಬಗ್ಗೆ ಕ್ರೋಧಗೊಂಡಿದ್ದು, ಇಲ್ಲಿ ನಿಜವಾಗಿಯು ಪ್ರಾಣಿ ಯಾರೆಂದು ಕಂಡುಹಿಡಿಯಿರಿ. ಕೇವಲ ಒಂದು ಟಿಕ್ಟಾಕ್ ವಿಡಿಯೋಗಾಗಿ ಇಂತಹ ವರ್ತನೆ ಎಷ್ಟು ಸರಿ. ಇಂತಹವರನ್ನ ಸುಮ್ಮನೆ ಬಿಡಬಾರದು ಎಂದು ಟ್ವೀಟ್ ಮಾಡಿದ್ದಾರೆ.