ಬೆಂಗಳೂರು: ಬೆಲೆ ಏರಿಕೆ ಬಿಸಿ ಮತ್ತೆ ಸಾರ್ವಜನಿಕರಿಗೆ ತಟ್ಟಲಿದೆಯೇ ಎಂಬ ಆತಂಕ ಎದುರಾಗಿದ್ದ ಬೆನ್ನಲ್ಲೇ ಇದೀಗ ಜನರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ಸಧ್ಯಕ್ಕೆ ಬೆಲೆ ಏರಿಕೆಯ ನಿರ್ಧಾರ ಇಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಹಾಲು, ನೀರು, ವಿದ್ಯುತ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾಪ ಬಂದಿದೆ. ಆಡಳಿತದಲ್ಲಿ ದರ ಏರಿಕೆ ಪ್ರಸ್ತಾಪ ಬರುವುದು ಸಹಜ. ಆದರೆ ದರ ಏರಿಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದರು.
ಅವಸರದ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲ್ಲ. ಎಲ್ಲಾ ಆಯಾಮಗಳಿಂದಲೂ ಚರ್ಚೆ ನಡೆಸಿ ದರ ಏರಿಕೆ ಬಗ್ಗೆ ನಿರ್ಧರಿಸಲಾಗುತ್ತದೆ. ಆದರೆ ಸಧ್ಯಕ್ಕೆ ಯಾವುದೇ ದರ ಏರಿಕೆ ಇಲ್ಲ ಎಂದು ಹೇಳಿದರು.
ಈಗಾಗಲೇ ಜಲಮಂಡಳಿ, ಕೆಎಂಎಫ್, ಎಸ್ಕಾಂ ಗಳಿಂದ ಬೆಲೆ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಶೀಘ್ರವೇ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ ಎನ್ನಲಾಗಿತ್ತು. ಆದರೆ ಇದೀಗ ಈ ಆತಂಕಕ್ಕೆ ಸಿಎಂ ತಾತ್ಕಾಲಿಕ ತೆರೆ ಎಳೆದಿದ್ದಾರೆ.