ನವದೆಹಲಿ : ಯುವ ಪೀಳಿಗೆ ಇತ್ತೀಚೆಗೆ ಸಿನಿಮಾ ಹಾಗೂ ಸಾಮಾಜಿಕ ಜಾಲತಾಣಗಳನ್ನು ಪ್ರೇರಣೆಯಾಗಿ ಪಡೆದುಕೊಂಡು ತಪ್ಪು ದಾರಿ ತುಳಿಯುತ್ತಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಇದಕ್ಕೆ ಪುಷ್ಟಿ ಎನ್ನುವಂತೆ ಇಲ್ಲೊಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ಬೆಳಕಿಗೆ ಬಂದಿದ್ದು, ಇಲ್ಲಿ ಬಾಲಕರು ತಾವೇ ಒಂದು ಗ್ಯಾಂಗ್ ರಚಿಸಿದ್ದಾರೆ. ಅದನ್ನು ಬದ್ನಾಮ್ ಗ್ಯಾಂಗ್ ಎಂದು ಕರೆದುಕೊಂಡಿದ್ದಾರೆ. ಇವರೆಲ್ಲ ಇತ್ತೀಚೆಗಷ್ಟೇ ತೆರೆ ಕಂಡಿದ್ದ ಪುಷ್ಪ ಚಿತ್ರದ ಮುಖ್ಯ ಪಾತ್ರದ ಕೆಲವು ಅಂಶಗಳ ಮೇಲೆ ಪ್ರಭಾವಿತರಾಗಿ ಅಪರಾಧ ಕೃತ್ಯಕ್ಕೆ ಕೈ ಹಾಕಿದ್ದರು ಎನ್ನಲಾಗಿದೆ.
ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನೊಂದಿಗೆ ಜಗಳ ಮಾಡಿ, ಆತನ ಹೊಟ್ಟೆಗೆ ಚಾಕು ಹಾಕಿದ್ದಾರೆ. ಆ ವ್ಯಕ್ತಿ ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಲ್ಲದೇ, ಈ ಹತ್ಯೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಕೂಡ ಇವರು ಮುಂದಾಗಿದ್ದರು ಎಂದು ತಿಳಿದು ಬಂದಿದೆ.
ದೆಹಲಿಯ ಜಹಾಂಗೀರ್ ಪುರಿ ಪ್ರದೇಶದ ಶಿಬು(24) ಎಂಬ ವ್ಯಕ್ತಿಯನ್ನೇ ಈ ರೀತಿ ಕೊಲೆ ಮಾಡಿದ್ದಾರೆ. ಇವರ ಮಧ್ಯೆ ಜಗಳವಾಗಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇವರು ಭೌಕಾಲ ಹಾಗೂ ಪುಷ್ಪ ಚಿತ್ರ ಸೇರಿದಂತೆ ವೆಬ್ ಸರಣಿಯಲ್ಲಿ ಪ್ರಸಾರವಾಗುವ ಅಪರಾಧ ಕೃತ್ಯಗಳಿಗೆ ಪ್ರಭಾವಿತರಾಗಿ ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಇಂತಹ ಕೃತ್ಯಕ್ಕೆ ಮುಂದಾಗಿದ್ದರು. ಅಲ್ಲದೇ, ಇದು ವೈರಲ್ ಆಗುತ್ತಿದ್ದಂತೆ ಪ್ರಸಿದ್ಧರಾಗುತ್ತೇವೆ ಎಂಬ ಭಾವನೆ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕೊಲೆಯ ವಿಡಿಯೋ ಚಿತ್ರೀಕರಿಸಿದ್ದ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.