ಬೆಂಗಳೂರು: ರಾಜ್ಯದಲ್ಲಿ ಕೊರೊನಾ, ಒಮಿಕ್ರಾನ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನವರಿ 25-26 ರೊಳಗೆ ಮತ್ತಷ್ಟು ಉತ್ತುಂಗಕ್ಕೇರುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರಕ್ಕೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃದಲ್ಲಿ ನಡೆದ ಅಧಿಕಾರಿಗಳು ಹಾಗೂ ಸಚಿವರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, ಹೆಚ್ಚುವರಿಯಾಗಿ ಯಾವುದೇ ಹೊಸ ನಿಯಮ ಜಾರಿ ಇಲ್ಲ. ಈಗಿರುವ ನಿಯಮಗಳೇ ಶುಕ್ರವಾರದವರೆಗೆ ಮುಂದುವರೆಯಲಿದೆ. ಮುಂದಿನ ಶುಕ್ರವಾರದವರೆಗೆ ಪರಿಸ್ಥಿತಿ ನೋಡಿಕೊಂಡು ಮತ್ತೊಂದು ಸಭೆ ನಡೆಸಿ ಟಫ್ ರೂಲ್ಸ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ರಾಜ್ಯದಲ್ಲಿ ಕೊರೊನಾ ಸ್ಥಿತಿಗತಿ, ಪಾಸಿಟಿವಿಟಿ ರೇಟ್, ಜಿಲ್ಲೆಗಳಲ್ಲಿ ಲಸಿಕಾಕರಣ, ಆಸ್ಪತ್ರೆಗಳಲ್ಲಿ ಆಕ್ಸಿಜನ್, ಬೆಡ್ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಜನವರಿ 25-26ರೊಳಗೆ ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನಷ್ಟು ಪೀಕ್ ಹಂತ ತಲುಪಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜನವರಿ 25ರ ಬಳಿಕ ಕೋವಿಡ್ ಸಂಖ್ಯೆ ಇಳಿಮುಖವಾಗಬಹುದು ಹಾಗಾಗಿ ಶುಕ್ರವಾರದವರೆಗೆ ನೋಡಿಕೊಂಡು ಸಿಎಂ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ಕಠಿಣ ನಿಯಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಶಾಲಾ-ಕಾಲೇಜು ಬಗ್ಗೆಯೂ ಶುಕ್ರವಾರದ ಸಭೆ ಬಳಿಕ ತೀರ್ಮಾನ ಮಾಡಲಾಗುವುದು. ಸಧ್ಯಕ್ಕೆ ಯಾವುದೇ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಆದರೆ ಜನರ ಆರೋಗ್ಯ ಜೀವ ಕಾಪಾಡುವುದು ಮುಖ್ಯ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.